ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಹಾಗೂ ರಾಜಭವನವನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಹಾಗೂ ತಕ್ಷಣ ದುರುಪಯೋಗ ನಿಲ್ಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ನೇತೃತ್ವದಲ್ಲಿ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಅರೆ ಬೆತ್ತಲೆ ಮೆರವಣಿಗೆ ಆರಂಭಿಸಿ, ಮಹಾತ್ಮಾ ಗಾಂಧಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಖಂಡರೆಲ್ಲ ಸೇರಿ ಜಿಲ್ಲಾ ಅಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಲಿದೆ ಎಂದರು.ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ರಾ ಭವನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಅಪರಾಧಗಳ ತನಿಖೆ ಸಂಸ್ಥೆಗಳಿಗಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದರು.ಈ ವೇಳೆ ಮುಖಂಡರಾದ ವೈ.ಸಿ.ಮಯೂರ, ರಮೆಶ ಧರಣಾಕರ, ಮಹಾಂತೇಶ ಸಾಸಾಬಾಳ, ಶರಣಗೌಡ ಪಾಟೀಲ, ವಿಜಯ ಕಾಂಬಳೆ, ಅರುಣ ಗವಾರಿ, ರಮೇಶ ನಿಂಬಾಳಕರ, ಬಾಬು ಗುಣಮಿ, ರಾಮಚಂದ್ರ ದೊಡಮನಿ, ಪ್ರಶಾಂತ ತೊರವಿ, ಜೈಭೀಮ ತಳಕೆರಿ, ಜಾನು ಗುಡಿಮನಿ, ಚೇತನ ರಾಯಣ್ಣವರ, ಶಿವರುದ್ರ ಮೂಲಿಮನಿ, ಯಮನೂರಿ ಬೆಕ್ಕಿನಾಳ, ನಾಗು ರೆಡ್ಡಿ, ಸೋಮು ಬಡಿಗೇರ, ಮಲಕಪ್ಪ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.