ಬಳ್ಳಾರಿಯಲ್ಲಿ ಡಿಎಸ್‌ಎಸ್‌ನಿಂದ ಅರೆಬೆತ್ತಲೆ ಪ್ರತಿಭಟನೆ

| Published : Nov 07 2024, 12:02 AM IST

ಬಳ್ಳಾರಿಯಲ್ಲಿ ಡಿಎಸ್‌ಎಸ್‌ನಿಂದ ಅರೆಬೆತ್ತಲೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಮುಡಾ ಹಗರಣದ ಆರೋಪ ಮಾಡಿ ಅವರ ನೈತಿಕತೆಯನ್ನು ಕುಗ್ಗಿಸುವ ಷಡ್ಯಂತ್ರ್ಯವನ್ನು ಬಿಜೆಪಿ ರೂಪಿಸಿದೆ.

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ್ ಬಣ) ಕಾರ್ಯಕರ್ತರು ನಗರದಲ್ಲಿ ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶದ ಅಖಂಡಂತೆಗೆ ಧಕ್ಕೆ ತಂದಿದೆ. ಸಂವಿಧಾನದ ಆಶಯಗಳನ್ನು ಮೂಲೆ ಗುಂಪು ಮಾಡಿದೆ. ಜನಪರವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಹಾಗೂ ಐಟಿಗಳನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಮುಡಾ ಹಗರಣದ ಆರೋಪ ಮಾಡಿ ಅವರ ನೈತಿಕತೆಯನ್ನು ಕುಗ್ಗಿಸುವ ಷಡ್ಯಂತ್ರ್ಯವನ್ನು ಬಿಜೆಪಿ ರೂಪಿಸಿದೆ. ಒಂದು ವೇಳೆ ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸಿದರೆ ಈ ಸಮಾಜದ ಬಹುಜನರ ವಿಚಾರಧಾರೆಗಳ ಮೇಲೆ ದಾಳಿ ನಡೆದಂತಾಗುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಬಹುಜನ ಸಮುದಾಯ ಜಾಗೃತವಾಗಿದ್ದು ಬಿಜೆಪಿ ಕೋಮುವಾದಿ ಹಾಗೂ ಜನವಿರೋಧಿ ಧೋರಣೆ ವಿರುದ್ಧ ಹೋರಾಟ ಮುಂದುವರಿಸಲಾಗುವುದು. ಕೇಂದ್ರದ ದುರಾಡಳಿತ ನೀತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಂಚಾಲಕ ಎ.ಮಾನಯ್ಯ ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ದಲಿತ ಸಮುದಾಯದ ಹಿತ ಕಾಯುವ ಯಾವುದೇ ಆಶಯಗಳಿಲ್ಲ. ಬದಲಿಗೆ ಶೋಷಿತ ಸಮಾಜಗಳ ಪರ ಕಾರ್ಯನಿರ್ವಹಿಸುವ ಸರ್ಕಾರವನ್ನು ಅಸ್ಥಿರಗೊಳಿಸುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಬಿಜೆಪಿಯ ಹುನ್ನಾರಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಹೇಳಿದರು.

ಇಲ್ಲಿನ ಡಬಲ್ ರಸ್ತೆಯಲ್ಲಿರುವ ಜಿಲ್ಲಾ ಅಂಬೇಡ್ಕರ್ ಸಂಘದ ಕಚೇರಿಯಿಂದ ಮೆರವಣಿಗೆ ಹೊರಟ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಗಡಗಿಚನ್ನಪ್ಪ ವೃತ್ತ, ಗವಿಯಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಎಚ್‌.ಬಿ. ಗಂಗಪ್ಪ, ಎಚ್.ಆಂಜನೇಯ, ಕೊಳಗಲ್ ಮಲ್ಲಯ್ಯ, ಕೆ.ದೇವದಾಸ್, ನರಸಪ್ಪ, ಬಿ.ರಮೇಶ್, ನಾಗೇಂದ್ರಪ್ಪ, ಪಂಪಾಪತಿ, ಎರಿಸ್ವಾಮಿ, ಹುಲುಗಪ್ಪ ಬೆಳಗಲ್, ರಾಮಯ್ಯ, ಎಚ್.ಮಲ್ಲಪ್ಪ, ಜಗದೀಶ್ ಮೆಟ್ರಿ, ಕುಮಾರ್ ಕಂಪ್ಲಿ, ಮಾರೆಪ್ಪ, ಶಂಕರ್ ಸೇರಿದಂತೆ ಸಂಘಟನೆಯ ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

6ಬಿಆರ್‌ವೈ1

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಡಿಎಸ್‌ಎಸ್‌ ಕಾರ್ಯಕರ್ತರು ಬಳ್ಳಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.