ದಸಂಸದಿಂದ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ

| Published : Nov 07 2024, 12:38 AM IST

ಸಾರಾಂಶ

ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ಹಗರಣದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಿ ಪತನಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ಖಂಡಿಸಿ ದಲಿತ ಸಂಘರ್ಷ ಸಮಿತಿಯವರು (ಡಿ.ಜಿ. ಸಾಗರ್ ಬಣ) ಬುಧವಾರ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.

ನಗರದ ನಜರ್ ಬಾದ್ ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯವರೆಗೂ ಅರೆಬೆತ್ತಲೆ ಮೆರವಣಿಗೆಯಲ್ಲಿ ತೆರಳಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕರು ಹೋರಾಟ ಪ್ರಾರಂಭಿಸಿದ್ದಾರೆ. ಎಫ್ಐಆರ್ ಆಗಿರುವ ಕಾರಣ ರಾಜೀನಾಮೆ ನೀಡಬೇಕೆಂಬ ಮಾನದಂಡ ನಿಗದಿಪಡಿಸಿದರೆ ಸಿದ್ದರಾಮಯ್ಯ ಮಾತ್ರವಲ್ಲ ಹಲವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಅವರು ಕಿಡಿಕಾರಿದರು.

ಧರ್ಮದ ಹೆಸರಿನಲ್ಲಿ ರಕ್ತಪಾತ ನಡೆಸಿದವರನ್ನು ಸಮರ್ಥಿಸಿಕೊಂಡು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡವರು ಬೇರೆ, ಬೇರೆ ಪಕ್ಷಗಳ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಕೊಂಡ ಆತ್ಮ ವಂಚಕರು, ಧರ್ಮ, ಧರ್ಮಗಳ ನಡುವೆ ಸೌಹಾರ್ದತೆಗೆ ದುಡಿಯುವ ಬಡ ಬಗ್ಗರಿಗೆ, ಅಸಹಾಯಕರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಸಿದ್ದರಾಮಯ್ಯ ಅವರ ನೈತಿಕತೆಯನ್ನು ಪ್ರಶ್ನಿಸುವುದು ವಿಪರ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಪ್ರಜಾಪ್ರಭುತ್ವವಾದಿಗಳನ್ನು ಮನುವಾದವನ್ನು ಪ್ರತಿಪಾದಿಸುವ ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗಗಳ ಮೂಲಕವೇ ಮಟ್ಟಹಾಕಿ, ಬಾಯಿ ಮುಚ್ಚಿಸುವ ಪ್ಯೂಡಲ್ ರಾಜಕಾರಣದ ಮಾದರಿ ದೇಶದಲ್ಲಿ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ದಸಂಸ ಮುಖಂಡರಾದ ಸಂಚಾಲಕ ಇಟ್ನ ರಾಜಣ್ಣ, ಕೊಳಗಟ್ಟ ಕೃಷ್ಣ, ಸುರೇಶ್, ಗೋವಿಂದರಾಜು, ಹನುಮಂತರಾಜು, ಸುರೇಶ್, ರಂಗನಾಥ್, ಶ್ರೀನಿವಾಸ್, ಮಹದೇವ್, ಮಲ್ಲೇಶ್, ರಾಜು ಮೊದಲಾದವರು ಇದ್ದರು.