ರೋಗಿಯ ಅರ್ಧದಷ್ಟು ರೋಗವನ್ನು ವೈದ್ಯರು ನೀಡುವ ಅಭಯದಿಂದ ಗುಣಪಡಿಸಬಹುದು.

ಕನ್ನಡಪ್ರಭ ವಾರ್ತೆ ಹೊನ್ನಾವರ

ರೋಗಿಯ ಅರ್ಧದಷ್ಟು ರೋಗವನ್ನು ವೈದ್ಯರು ನೀಡುವ ಅಭಯದಿಂದ ಗುಣಪಡಿಸಬಹುದು ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದ್ದಾರೆ.ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ಸಂಸ್ಕೃತಿ ಕುಂಭ-ಮಲೆನಾಡ ಉತ್ಸವ-2026 ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತಾ ಚಿಕಿತ್ಸಾ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.ಮನುಷ್ಯರಿಗೆ ಬಾಧಿಸಿದ ರೋಗವನ್ನು ಗುಣಪಡಿಸಲು ವೈದ್ಯಲೋಕ ಪ್ರಯತ್ನಿಸಬೇಕೇ ಹೊರತು, ರೋಗಿಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಎಂದಿಗೂ ಮುಂದಾಗಬಾರದು. ಯಾವುದೇ ರೋಗಿ ಆಗಿರಲಿ ಅವರಿಗೆ ಅಭಯ ನೀಡುವ ಮೂಲಕ ಧೈರ್ಯ ತುಂಬುವ ಕೆಲಸ ವೈದ್ಯರಿಂದ ಆಗಬೇಕು ಎಂದು ಅವರು ಸಲಹೆ ನೀಡಿದರು.

ಮನುಷ್ಯರಿಗೆ ಆರೋಗ್ಯ ಎಲ್ಲವೂ ಆಗಿದೆ. ಆರೋಗ್ಯ ಇಲ್ಲದಿದ್ದರೆ ಮನುಷ್ಯರಿಗೆ ಯಾವುದೂ ಇಲ್ಲ. ಇಂದು ವಿಶ್ವದಲ್ಲಿ ಮಾನಸಿಕ ಅನಾರೋಗ್ಯ ಬಹುದೊಡ್ಡದಾಗಿ ಕಾಡುತ್ತಿದೆ. ದೈಹಿಕ ಅನಾರೋಗ್ಯಕ್ಕೆ ವೈದ್ಯರು ಚಿಕಿತ್ಸೆ ನೀಡಿದರೆ, ಮಾನಸಿಕ ಅನಾರೋಗ್ಯಕ್ಕೆ ಆಧ್ಯಾತ್ಮಿಕತೆಯೇ ಮದ್ದಾಗಿದೆ. ಇಂದು ಆಂಜನೇಯನ ಸನ್ನಿಧಿಯಲ್ಲಿ ಎರಡೂ ಚಿಕಿತ್ಸೆಗಳು ಒಟ್ಟೊಟ್ಟಿಗೆ ಲಭಿಸುತ್ತಿದೆ ಎಂದು ಹೇಳಿದರು.ವಿಪರೀತ ಚಿಂತೆ ಮನುಷ್ಯನ ಮಾನಸಿಕ ಅನಾರೋಗ್ಯವನ್ನು ಕೆಡಿಸುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾದವರು ಸಹಜವಾಗಿಯೇ ದೈಹಿಕ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಚಿಂತೆ ಮನುಷ್ಯನನ್ನು ಚಿತೆಯ ವರೆಗೆ ಕೊಂಡೊಯ್ಯುತ್ತದೆ. ಆಧ್ಯಾತ್ಮಿಕತೆ ಮೈಗೂಡಿಸುವ ಮೂಲಕ ಚಿಂತೆಯಿಂದ ದೂರವಿರಬಹುದಾಗಿದೆ ಎಂದು ಸಲಹೆ ನೀಡಿದರು.ಮಾಜಿ ಸಚಿವ ಶಿವಣ್ಣ, ಕನ್ನಡಪ್ರಭದ ಸಂಪಾದಕ ಸಮನ್ವಯ(ವಿಶೇಷ ಯೋಜನೆ) ಪತ್ರಕರ್ತ ಬಿ.ವಿ. ಮಲ್ಲಿಕಾರ್ಜುನಯ್ಯ, ಹಿರಿಯ ವೈದ್ಯ ಡಾ. ಎಲ್.ಎಸ್. ಪಾಟೀಲ್, ವಕೀಲ ನಾಗರಾಜ್ ಗುತ್ತೇದಾರ್, ಎನ್.ಇ.ಎಲ್.ಎಸ್. ಶಾಲೆಯ ಅಧ್ಯಕ್ಷ ನರೇಂದ್ರ ಟಿ. ರಾಥೂರ್, ಪ್ರಾ.ಆ.ಪ.ಸಂ.ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಾದಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಎಸ್.ಎಸ್. ಸೌಹಾರ್ದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಿ.ಜಿ. ಶಂಕರ್, ವಿ.ಎಸ್.ಎಸ್. ನಗರಬಸ್ತಿಕೆರೆ ಸದಸ್ಯ ರಾಘವೇಂದ್ರ ನಾಯ್ಕ, ಪತ್ರಕರ್ತ ಡಿ.ಎಂ. ಸತೀಶ್ ಉಪಸ್ಥಿತರಿದ್ದರು.ಮಂಜುನಾಥ್ ಸ್ವಾಗತಿಸಿದರು. ನೂರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ತೃಪ್ತಿ ನಿರೂಪಿಸಿದರು.