ಸಾರಾಂಶ
ಹಳಿಯಾಳ: ಈ ಹಿಂದೆ ಶಿಕ್ಷಣಕ್ಕಾಗಿ ನಮ್ಮ ಯುವಸಮೂಹ ಹೊರಗಡೆ ಹೋಗುತ್ತಿತ್ತು. ಆದರೆ ಈಗ ಹೊರ ತಾಲೂಕು ಜಿಲ್ಲೆಗಳಿಂದ ವಿದ್ಯೆ ಪಡೆಯಲು ಯುವ ಸಮೂಹವು ಹಳಿಯಾಳಕ್ಕೆ ಬರುತ್ತಿದೆ. ಇಂದು ಹಳಿಯಾಳ ಶೈಕ್ಷಣಿಕ ಕೇಂದ್ರವಾಗಿ ಬೆಳಯುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಬುಧವಾರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024-25ನೇ ಸಾಲಿನ ಸಾಮಾನ್ಯ ಯೋಜನೆಯಡಿ ಅಂದಾಜು ₹2 ಕೋಟಿ ವೆಚ್ಚದಲ್ಲಿ 7 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ನಾಲ್ಕು ದಶಕಗಳ ಹಿಂದೇ ಇದ್ದು ಹಳಿಯಾಳಕ್ಕೂ ಈಗಿನ ಹಳಿಯಾಳಕ್ಕೂ ಅಜಗಜಾಂತರವಿದೆ. ನಾನು ಮೊದಲ ಬಾರಿಗೆ ಶಾಸಕನಾದ ಸಮಯದಲ್ಲಿ ಹಳಿಯಾಳದಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಷ್ಟೊಂದು ಸೌಲಭ್ಯಗಳಿರಲಿಲ್ಲ. ಅದಕ್ಕಾಗಿ ನಾನು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದೆ. ಪರಿಣಾಮ ತಾಲೂಕಿನಲ್ಲೇ ಆರೋಗ್ಯ ಕೇಂದ್ರಗಳು, ಘಟಕಗಳು ಆರಂಭಗೊಂಡವು. ಪ್ರತಿ ಹಳ್ಳಿಗಳಲ್ಲಿಯೂ ಪ್ರಾಥಮಿಕ ಶಾಲೆಗಳು, ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳು, ಕಾಲೇಜುಗಳು ನಿರ್ಮಾಣಗೊಂಡವು. ಇಂದು ಹಳಿಯಾಳ ತಾಲೂಕಿನಲ್ಲಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಕಾಲೇಜು, ಐಟಿಐ ಸೇರಿದಂತೆ ಎಲ್ಲ ಶೈಕ್ಷಣಿಕ ಸೌಲಭ್ಯಗಳು ಹಳಿಯಾಳದಲ್ಲಿ ಲಭ್ಯವಾಗಿದೆ. ನಿಮ್ಮ ಊರಿನಲ್ಲಿಯೇ ದೊರೆಯುವ ಈ ಶೈಕ್ಷಣಿಕ ಸೌಲಭ್ಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ದೇಶಪಾಂಡೆ ಕರೆ ನೀಡಿದರು.
ಕೌಶಲ್ಯ ಮತ್ತು ಬುದ್ಧಿಮತ್ತೆಗೆ ಮಣೆ:ಆಧುನಿಕ ಜಗತ್ತಿನಲ್ಲಿ ಸೌಲಭ್ಯಗಳು ಹೆಚ್ಚಾದಂತೆ ಪೈಪೋಟಿಗಳು ಸ್ಪರ್ಧೆಗಳು ಹೆಚ್ಚಾದವು. ಇಂದು ಈ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಜಾಣ್ಮೆ, ಕೌಶಲ್ಯ ಬುದ್ಧಿಮತ್ತೆ ಇದ್ದವನೇ ಯಶಸ್ವಿಯಾಗಬಲ್ಲ. ಅದಕ್ಕಾಗಿ ಯುವ ಪೀಳಿಗೆಯು ಈ ಬದುಕಿನ ಸ್ಪರ್ಧೆಗೆ ಅಣಿಯಾಗಬೇಕು ಎಂದರು.
21ನೇ ಶತಮಾನದಲ್ಲಿ ವಿದ್ಯೆ ಶಿಕ್ಷಣ ಇಲ್ಲದವರಿಗೆ ಸಮಾಜದಲ್ಲಿ ಬೆಲೆಯಿಲ್ಲ. ಅದಕ್ಕಾಗಿ ನಾವು ಸಹ ಬದಲಾವಣೆಗೆ ಸಜ್ಜಾಗಬೇಕು. ಅಪ್‌ಡೇಟ್ ಆಗಬೇಕು ಎಂದು ಅಭಿಪ್ರಾಯಪಟ್ಟರು. ಇಂದು ಹೊಸ ಅವಿಷ್ಕಾರಗಳು ಸಂಶೋಧನೆಗಳು ವಿಶ್ವವನ್ನೇ ಮನೆ ಬಾಗಿಲಿಗೆ ತಂದಿರಿಸಿವೆ. ಜಗತ್ತಿನ ಆಗು-ಹೋಗುಗಳ ಮಾಹಿತಿಯು ಬೆರಳ ತುದಿಯಲ್ಲಿ ಸಿಗುತ್ತಿದೆ. ತಂತ್ರಜ್ಞಾನ ಕೌಶಲ್ಯತೆ ಈ ಜಗತ್ತಿನಲ್ಲಿ ಯಶಸ್ಸನ್ನು ಗಳಿಸಲು ನಾವು ಶ್ರಮಪಟ್ಟು ಕಲಿಯುವ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಯುವ ಸಮೂಹ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕಾಗಿದೆ. ಅದರೊಂದಿಗೆ ಪಾಲಕರು, ಸಮಾಜ ಹಾಗೂ ದೇಶವು ಕಂಡ ಕನಸನ್ನು ಹಾಗ ತಮ್ಮ ಜೀವನದ ಗುರಿಯನ್ನು ಸಾಕಾರಗೊಳಿಸಬೇಕು ಎಂದರು.ಕಾಲೇಜಿನ ಪ್ರಾಚಾರ್ಯ ಸತೀಶ್ ಎಂ. ಗಾಂವಕರ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಪ್ರಗತಿಯನ್ನು ಮಂಡಿಸಿ, ಕಾಲೇಜು ಅಭಿವೃದ್ಧಿಗಾಗಿ ಸರ್ಕಾರದಿಂದ ಮತ್ತು ಉದ್ಯಮಿ ಸ್ನೇಹಿತರ ಸಿ.ಎಸ್.ಆರ್ ಅನುದಾನದಲ್ಲಿ ಶಾಸಕ ದೇಶಪಾಂಡೆ ತಂದ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ನೀಡಿದರು.
ಪುರಸಭಾ ಸದಸ್ಯ ಅಜರ್ ಬಸರಿಕಟ್ಟಿ, ನಾಮ ನಿರ್ದೇಶಿತ ಸದಸ್ಯ ಸತ್ಯಜಿತ ಗಿರಿ ಇದ್ದರು. ಉಪನ್ಯಾಸಕ ವೆಂಕಟೇಶ್ ಹಾಗೂ ಲಕ್ಷ್ಮೀ ಎಂ. ಹಾಗೂ ಪ್ರಿಯಾಂಕ್ ಕಾರ್ಯಕ್ರಮ ನಿರ್ವಹಿಸಿದರು.