ಸಂವಿಧಾನಾತ್ಮಕವಾದಂತ ಈ ನಾಲ್ಕು ಸ್ತಂಭಗಳ ಮೇಲೆ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಸರ್ವಾಧಿಕಾರ ಮತ್ತು ರಾಜ್ಯ ಪ್ರಭುತ್ವ ನಮ್ಮ ದೇಶದಲ್ಲಿ ಇಲ್ಲ
ಹಾಸನ ಡಿಸಿಗೆ ಏಕವಚನದಲ್ಲಿ ಮಾತಾನಾಡಿದ್ದ ಎಚ್.ಡಿ. ರೇವಣ್ಣ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಹಾಸನ ಜಿಲ್ಲಾಧಿಕಾರಿ ಕೆ. ಲತಾ ಕುಮಾರಿ ಅವರ ಬಗ್ಗೆ ಹೊಳೆನಸೀಪುರ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಏಕವಚನದಲ್ಲಿ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಿಸಿ ಬಗ್ಗೆ ರೇವಣ್ಣ ಅವರು ಏಕವಚನದಲ್ಲಿ ಮಾತನಾಡಿರುವುದು ಮತ್ತು ಧಮುಕಿ ಹಾಕುವ ರೀತಿಯಲ್ಲಿ ಮಾತನಾಡಿರುವುದು ಅಕ್ಯಮ್ಯ ಅಪರಾಧವಾಗಿದ್ದು, ಕೂಡಲೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ರಾಜ್ಯ ಹಳ್ಳಿ ಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ಆಗ್ರಹ ವೆಂಕಟರೋಣಪ್ಪ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಪತ್ರಿಕಾ ರಂಗ ಅತ್ಯಂತ ಮಹತ್ವದ ಜವಾಬ್ದಾರಿಗಳನ್ನು ಕರ್ತವ್ಯಗಳನ್ನು ನಿರ್ವಹಿಸುತ್ತವೆ. ಸಂವಿಧಾನಾತ್ಮಕವಾದಂತ ಈ ನಾಲ್ಕು ಸ್ತಂಭಗಳ ಮೇಲೆ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಸರ್ವಾಧಿಕಾರ ಮತ್ತು ರಾಜ್ಯ ಪ್ರಭುತ್ವ ನಮ್ಮ ದೇಶದಲ್ಲಿ ಇಲ್ಲ ಎಂದರು.ಇತ್ತೀಚೆಗೆ ಶಾಸಕರು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಹೀಯಾಳಿಸಿ ಮಾತನಾಡುವ ಪ್ರವೃತ್ತಿಯನ್ನು ಪುದರ್ಶಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಸಭೆಗಳಲ್ಲಿ ಸರ್ಕಾರಿ ನೌಕರರನ್ನು ಅತ್ಯಂತ ಕೀಳು ಮಟ್ಟದಲ್ಲಿ ನೋಡುವ ದೃಶ್ಯಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ನೋಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತರುವಂತದ್ದು ಅಲ್ಲ. ಕೆಲವು ಕಡೆ ಅಧಿಕಾರಿಗಳನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬಳಸಿಕೊಳ್ಳುತ್ತಾ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ತಾವು ಹೇಳಿದಂತೆ ನಡೆಸಿಕೊಳ್ಳುವ ಶಾಸಕರಿಗೂ ಬರವಿಲ್ಲ.
ಎಚ್.ಡಿ.ರೇವಣ್ಣ ಅವರು ಏಕವಚನದಲ್ಲಿ ಧುಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದರೂ ಸಹ ಆ ಜಿಲ್ಲಾಧಿಕಾರಿಗಳು ಅತ್ಯಂತ ಪ್ರಬುದ್ಧ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಹೀಗೆ ಸರಿಯುತ್ತರ ನೀಡುವ ದಿಟ್ಟತನ ಬಹಳಷ್ಟು ಅಧಿಕಾರಿಗಳಿಗೆ ಇರುವುದಿಲ್ಲ. ಇವರು ಮಾತನಾಡಿರುವ ರೀತಿ ನೋಡಿದರೆ ಇವರು ತಮ್ಮ ಜನಸೇವೆ ಅವಧಿಯಲ್ಲಿ ಯಾವ ರೀತಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳನ್ನು ನಡೆಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ವಿಶೇಷವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಕೆ ಲತಾ ಕುಮಾರಿಯವರು ಶೋಷಿತ ಸಮುದಾಯದಿಂದ ಬಂದದ್ದು ಸಹಿಸಲಾಗದೆ ಅವರ ಮೇಲೆ ಅಲ್ಲಿನ ಶಾಸಕ ರೇವಣ್ಣ ದರ್ಪ ತೋರುತಿದ್ದಾರೆ ಎಂದರು.ಕೂಡಲೇ ಜಿಲ್ಲಾಧಿಕಾರಿ ಲತಾಕುಮಾರಿಯವರನ್ನು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಹಳ್ಳಿ ಮಕ್ಕಳ ಸಂಘದ ಜಿಲ್ಲಾದ್ಯಕ್ಷ ಮುರುಳಿ, ಗೌರವಾದ್ಯಕ್ಷ ವರವಿಂದಯ್ಯ, ಮಹಿಳಾದ್ಯಕ್ಷೆ ವೆಂಕಟಲಕ್ಷ್ಮಿ ಮತ್ತಿತರರು ಇದ್ದರು. ಸಿಕೆಬಿ-6 ಸುದ್ದಿಗೋಷ್ಠಿಯಲ್ಲಿ ವೆಂಕಟರೋಣಪ್ಪ ಮಾತನಾಡಿದರು.