ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಅಂತಾರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಭಾರತೀಯ ಗ್ರಾಮೀಣ ಯುವಕನೋರ್ವ ಕಮಾಲ್‌ ಮಾಡಿದ್ದಾನೆ. ಈಚೆಗೆ ಮಲೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟ್ವಿನ್ಸ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೇರಿ ಎಂಬ ಪುಟ್ಟ ಗ್ರಾಮದ ಯುವಕ ಮಹ್ಮದ್‌ ಕೈಫ್ ಮೀರಾಸಾಬ ಮುಲ್ಲಾ ತನಗಿರುವ ಸೀಮಿತ ಸೌಲಭ್ಯಗಳ ನಡುವೆಯೂ ಅತ್ಯುನ್ನತ ಸಾಧನೆ ಮಾಡಿರುವ ಅಪ್ಪಟ ಗ್ರಾಮೀಣ ಪ್ರತಿಭೆ. ಬಾಲ್ಯದಿಂದಲೇ ಬಾಕ್ಸಿಂಗ್‌ನತ್ತ ಆಕರ್ಷಿತರಾಗಿದ್ದ ಕೈಫ್‌, ನಿರಂತರ ಪರಿಶ್ರಮ, ಶಿಸ್ತುಬದ್ಧ ಜೀವನ, ಪಾರ್ಟ್‌ಟೈಮ್‌ ಕೆಲಸ ಹಾಗೂ ಕಠಿಣ ತರಬೇತಿಯ ಮೂಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬಾಕ್ಸಿಂಗ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಕೊಡುಗೆಯಾಗಿ ನೀಡಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿರಡಾಣ ಗಂಗಾಧರ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌, ಪಿಯುಸಿಯನ್ನು ಹುಬ್ಬಳ್ಳಿಯ ಮಹೇಶ ಪಿಯು ಕಾಲೇಜಿನಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಕಲಿಯಲು ಆರಂಭಿಸಿದರು. ಮೊದಲಿನಿಂದಲೂ ಬಾಕ್ಸಿಂಗ್‌, ಕರಾಟೆ, ಟ್ವೆಕಾಂಡೋದಲ್ಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕೈಫ್‌, ಬೆಂಗಳೂರಿನ ಖಾಸಗಿ ಬಾಕ್ಸಿಂಗ್‌ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಆರಂಭಿಸುತ್ತಾರೆ. 2023ರಲ್ಲಿ ಬೆಂಗಳೂರಿನಲ್ಲಿ ನಡೆದ ಮುಯೆ ಥಾಯ್ (Muay thai) ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ ಮಹ್ಮದ್‌ ಕೈಫ್‌ ಕಂಚಿನ ಪದಕ ಪಡೆಯುತ್ತಾರೆ. ಬಳಿಕ 2024ರಲ್ಲೂ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನ ಎರಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಹ್ಮದ್‌ ಕೈಫ್‌ ಚಿನ್ನ ಹಾಗೂ ಬೆಳ್ಳಿಯ ಪದಕ ಪಡೆದು ಜಯಶಾಲಿಯಾಗುತ್ತಾರೆ.


ಎಂಬಿಎ ವ್ಯಾಸಂಗದಲ್ಲಿ ಒಂದು ಸೆಮಿಸ್ಟರ್‌ ಹೊರದೇಶದಲ್ಲಿ ಕಲಿಯುವ ಅವಕಾಶವಿತ್ತು. ಇದನ್ನೇ ಸದುಪಯೋಗ ಪಡೆದುಕೊಂಡ ಮಹ್ಮದ್‌ ಕೈಫ್‌ ಮಲೇಷಿಯಾಕ್ಕೆ ತೆರಳಿ ವ್ಯಾಸಂಗದೊಂದಿಗೆ ಬಾಕ್ಸಿಂಗ್‌ ತರಬೇತಿ ಮುಂದುವರಿಸಿದರು. ಅಲ್ಲಿಯೇ ಇದ್ದ ಪಿಬಿಕೆ ಫೈಟ್‌ ಕ್ಲಬ್ ಸೇರಿಕೊಂಡು ಅಮೀರ್‌ ಹೈಕಲ್‌ ಎಂಬ ಕೋಚ್‌ನಲ್ಲಿ ತರಬೇತಿ ಪಡೆದುಕೊಂಡರು. ಅಲ್ಲಿಂದಲೇ 65 ಕೆಜಿ ವಿಭಾಗದಲ್ಲಿ ಅಂತಾರಾಷ್ಟ್ರೀಯ ಟ್ವಿನ್ಸ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಮಲೇಷಿಯಾದ ಸ್ಪರ್ಧಿಯನ್ನೇ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಹಳ್ಳಿ ಪ್ರತಿಭೆಯ ದಿಲ್ಲಿ ಸಾಧನೆ ಎಂಬಂತೆ ಅಪ್ಪಟ ಗ್ರಾಮೀಣ ಪ್ರತಿಭೆಯೊಂದು ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮಲೇಷಿಯಾಕ್ಕೆ ತೆರಳಿ ಅಲ್ಲಿನ ಸ್ಪರ್ಧಿಯನ್ನೇ ಮಣಿಸಿ ಬಂಗಾರದ ಪದಕ ಪಡೆದು ಸಾಧನೆ ತೋರಿರುವುದು ವಿಶೇಷ.ಕೆಫೆಯಲ್ಲಿ ಪಾರ್ಟ್‌ಟೈಮ್‌ ಕೆಲಸ:

ಮಹ್ಮದ್‌ ಕೈಫ್‌ ಅವರ ತಂದೆ ಶಿಕ್ಷಕರು. ಅವರು ಸಹ ಮಗನಿಗೆ ಬಾಕ್ಸಿಂಗ್‌ ಕಲಿಸಲು ತುಂಬ ಶ್ರಮ ವಹಿಸಿದ್ದಾರೆ. ಜತೆಗೆ ವ್ಯಾಸಂಗಕ್ಕಾಗಿ ಮಲೇಷಿಯಾಕ್ಕೆ ತೆರಳಿದ ವೇಳೆ ಇವರಿಗೂ ಓದಿನೊಂದಿಗೆ ಬಾಕ್ಸಿಂಗ್‌ ತರಬೇತಿ ಪಡೆಯಲು ಹಣಕಾಸಿನ ತೊಂದರೆಯಾಗುತ್ತದೆ. ಇದರಿಂದ ಧೃತಿಗೆಡದ ಕೈಫ್‌, ಮಲೇಷಿಯಾದಲ್ಲಿ ಕೆಫೆಯೊಂದರಲ್ಲಿ ಪಾರ್ಟ್‌ಟೈಮ್‌ ಕೆಲಸ ಮಾಡಿ ಬಂದ ಹಣ‍ದಲ್ಲಿ ಬಾಕ್ಸಿಂಗ್ ತರಬೇತಿ ಪಡೆದು ಈ ಸಾಧನೆ ತೋರಿರುವುದು ವಿಶೇಷ. ಮತ್ತೆ ಮಲೇಷಿಯಾಕ್ಕೆ ಹೋಗುವ ಇಚ್ಛೆಯಿಲ್ಲ. ಭಾರತದಲ್ಲಿಯೇ ಇದ್ದು ಇನ್ನೂ ಹೆಚ್ಟಿನ ತರಬೇತಿ ಪಡೆದು ಏಷಿಯನ್ ಚಾಂಪಿಯನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದು ವಿಶ್ವ ಬಾಕ್ಸಿಂಗ್ ಚಾಂಪಿಯನ್ (ಡಬ್ಲ್ಯೂಬಿಸಿ)ನಲ್ಲಿ ಸ್ಪರ್ಧಿಸುವ ಇಚ್ಛೆಯಿದೆ.

ಮಹ್ಮದ ಕೈಫ್‌ ಮುಲ್ಲಾ, ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಯುವಕ