ಅರ್ಧಕ್ಕೆ ನಿಂತ ಕಾಮಗಾರಿ: ಪ್ರಯಾಣಿಕರಿಗೆ ಕಿರಿಕಿರಿ

| Published : Jun 04 2024, 12:31 AM IST

ಅರ್ಧಕ್ಕೆ ನಿಂತ ಕಾಮಗಾರಿ: ಪ್ರಯಾಣಿಕರಿಗೆ ಕಿರಿಕಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಟಕ್ಕೊಡ ಕ್ರಾಸ್‌-ಹಿರೇಪಡಸಲಗಿ ರಸ್ತೆ - ಮೆಟ್ಲಿಂಗ್‌ ಮಾಡಿ ಅರ್ಧಕ್ಕೆ ಬಿಟ್ಟುಹೋದ ಗುತ್ತಿಗೆದಾರ

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಟಕ್ಕೊಡ ಕ್ರಾಸ್‌ನಿಂದ ಟಕ್ಕಳಕಿ ಮಾರ್ಗವಾಗಿ ಹಿರೇಪಡಸಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಮೂರು ಗ್ರಾಮಗಳ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. 2022ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿತ್ತು. ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆನಂದ ನ್ಯಾಮಗೌಡ ಶಾಸಕರಾಗಿದ್ದರು.

ಮೆಟ್ಲಿಂಗ್‌ ಮಾಡಿ ಬಿಟ್ಟು ಹೋದ ಗುತ್ತಿಗೆದಾರ:

ಸುಮಾರು ₹ 5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ದೊರೆತು, ಬಬಲೇಶ್ವರ ಪಟ್ಟಣದ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿದರು. ಹಿರೇಪಡಸಲಗಿ ಗ್ರಾಮದ ಹತ್ತಿರ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕಾಮಗಾರಿ ಪ್ರಾರಂಭಿಸಲಾಯಿತು. ರಸ್ತೆ ಅಗಲೀಕರಣ ಮಾಡಿ ಮೆಟ್ಲಿಂಗ್‌ ಮಾಡಿದ್ದ ಗುತ್ತಿಗೆದಾರರು ಬಳಿಕ ಇತ್ತಕಡೆ ಸುಳಿಯಲಿಲ್ಲ. ಪಕ್ಕಾರಸ್ತೆ ನಿರ್ಮಾಣವಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಕನಸು ಕಂಡಿದ್ದ ಮೂರು ಗ್ರಾಮಗಳ ಸಾರ್ವಜನಿಕರಿಗೆ ಭ್ರಮನಿರಶನವಾಗಿದೆ. ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಸರ್ಕಾರ ಬದಲಾಗಿ, ಇನ್ನೇನು ರಸ್ತೆ ಸುಧಾರಣೆಯಾಗುತ್ತದೆ ಎಂದು ಕನಸು ಕಂಡಿದ್ದ ಈ ಗ್ರಾಮಗಳ ಜನರ ಕನಸು ನುಚ್ಚು ನೂರಾಗಿದೆ. ಮೊದಲಿದ್ದ ರಸ್ತೆಯೇ ಪರವಾಗಿರಲಿಲ್ಲ. ಈಗಿನ ರಸ್ತೆಗೆ ಹಾಕಿದ್ದ ಖಡಿಗಳು ಮೇಲೆದ್ದು ಸಂಚಾರ ದುಸ್ತರವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸಂಚಾರಕ್ಕೆ ಸವಾರರ ಸರ್ಕಸ್‌:

ಖಡಿ ಹಾಕಿ ಮೆಟ್ಲಿಂಗ್ ಕಾಮಗಾರಿ ಮಾಡಿದ್ದು, ವಾಹನಗಳ ಓಡಾಟದಿಂದ ಖಡಿಗಳು ಮೇಲೆದ್ದು ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಅದರಲ್ಲೂ ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಪ್ರಯಾಣಿಸುವಂತಾಗಿದೆ. ಸ್ವಲ್ಪ ಯಾಮಾರಿದರೂ ಸ್ಕಿಡ್ ಆಗಿ ಅಪಘಾತಕ್ಕೀಡಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ರಸ್ತೆ ಧೂಳಿನಿಂದ, ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದ್ದು, ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಗುತ್ತಿಗೆದಾರರಿಗೆ ಬಾರದ ಹಣ:

ಗುತ್ತಿಗೆದಾರರಿಗೆ ಬಿಲ್ ಸಂದಾಯವಾಗಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿದರೆ ರಸ್ತೆ ಕಾಮಗಾರಿ ಪುನಃ ಪ್ರಾರಂಭಿಸುವುದಾಗಿ ಗುತ್ತಿಗೆದಾರರು ದೂರವಾಣಿ ಕರೆ ಮಾಡಿದ ಮುಖಂಡರಿಗೆ ಸಮಜಾಯಿಸಿ ನೀಡುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ಗೊಂದಲದಲ್ಲಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಮೂರು ಗ್ರಾಮಗಳ ಸಾರ್ವಜನಿಕರು ಪ್ರತಿನಿತ್ಯ ಕಚ್ಚಾ ರಸ್ತೆಯಲ್ಲಿಯೇ ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೂರು ಗ್ರಾಮಗಳ ಮುಖಂಡರು ಹಲವು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

--------------

ರಸ್ತೆ ಕಾಮಗಾರಿ ಹಣಕಾಸಿನ ಕೊರತೆಯಿಂದಾಗಿ ಅಪೂರ್ಣಗೊಂಡಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಪುನಃ ಕಾಮಗಾರಿ ಪ್ರಾರಂಭಿಸಲಾಗುವುದು,

- ಪಟ್ಟಣಶೆಟ್ಟಿ ಗುತ್ತಿಗೆದಾರರು

--------

ಬಿಜೆಪಿ ಸರ್ಕಾರ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿ ಎಂದು ಟಕ್ಕೊಡ ಕ್ರಾಸ್‌ನಿಂದ ಹಿರೇಪಡಸಲಗಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಮುಂದಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಉಚಿತ ಭಾಗ್ಯಗಳಿಗೆ ಸರ್ಕಾರ ಹಣ ಕರ್ಚು ಮಾಡುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ.

-ಶ್ರೀಕಾಂತ ಕುಲಕರ್ಣಿ ಮಾಜಿ ಶಾಸಕರು.

------

ಟಕ್ಕಳಕಿ ರಸ್ತೆಯ ಮುಖಾಂತರ ನಿತ್ಯ ಓಡಾಟ ಮಾಡಬೇಕಾದ ಅನಿವಾರ್ಯತೆ ಇದೆ. ರಸ್ತೆ ಕಾಮಗಾರಿ ನಿಂತು ಹೋಗಿದ್ದು ತುಂಬಾ ತೊಂದರೆಯಾಗಿದೆ. ಬೇಸಿಗೆಯಲ್ಲಿ ಧೂಳಿನ ಸಮಸ್ಯೆ, ಮಳೆಗಾಲದಲ್ಲಿ ಕೆಸರಿನ ರಸ್ತೆಯಲ್ಲಿ ಓಡಾಡಬೇಕು.

- ಮಲ್ಲೇಶ ಹುಟಗಿ ಮಾಜಿ ಗ್ರಾಪಂ ಅಧ್ಯಕ್ಷರು