ಈ ಬಾರಿ ರಾಣಿ ಚೆನ್ನಮ್ಮ ಮೈದಾನದಲ್ಲಿ ಬಾಲಕೃಷ್ಣ ಅವತಾರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಸಜ್ಜಾಗಿದ್ದು, ಮಹಾನಗರ ಪಾಲಿಕೆಯಿಂದ ಮೂರು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ನಾಲ್ಕನೇ ವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಮಂಗ‍ಳವಾರ ಉತ್ಸವ ಮಂಡಳಿ ಮಂಟಪದ ಹಾಲಕಂಬಕ್ಕೆ ವಿಶೇಷವಾಗಿ ಪೂಜೆ ನೆರವೇರಿಸಲಾಯಿತು.

ಈ ಬಾರಿ ರಾಣಿ ಚೆನ್ನಮ್ಮ ಮೈದಾನದಲ್ಲಿ ಬಾಲಕೃಷ್ಣ ಅವತಾರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಸಜ್ಜಾಗಿದ್ದು, ಮಹಾನಗರ ಪಾಲಿಕೆಯಿಂದ ಮೂರು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

ಮಂಗಳವಾರ ಶಾಸ್ರೋಕ್ತವಾಗಿ ಹಂದರಕ್ಕೆ ಹಾಲಕಂಬ ಪೂಜೆ ಮಾಡಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿಯ ಅಧ್ಯಕ್ಷ ಸಂಜಯ ಬಡಸ್ಕ‌ರ್, ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿಎಸ್‌ವಿ ಪ್ರಸಾದ್, ಉಪ ಮೇಯರ್ ಸಂತೋಷ ಚವ್ಹಾಣ, ಸುಭಾಷಸಿಂಗ್ ಜಮಾದಾರ, ರಮೇಶ ಕದಂ, ಜಯತೀರ್ಥ ಕಟ್ಟಿ, ರಘು, ಪವಾರ, ಸಂಗಮ ಶೆಟ್ಟರ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಬಾರಿ ವಿಶಿಷ್ಠವಾಗಿ ಹಬ್ಬ ಆಚರಿಸಲು ಮಹಾಮಂಡಳಿ ಸಿದ್ಧತೆ ನಡೆಸಿದ್ದು, ಆ. 27ರಂದು ಬುಧವಾರ ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಗಣಪತಿಯನ್ನು ಮೆರವಣಿಗೆಯ ಮೂಲಕ ಚೆನ್ನಮ್ಮ ಮೈದಾನಕ್ಕೆ ತಂದು ನಿಶ್ಚಿತಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬೆಳಗ್ಗೆ 9ಕ್ಕೆ ಪ್ರತಿಷ್ಠಾಪನೆ ಪೂಜೆ, ಮಧ್ಯಾಹ್ನ 1ರಿಂದ ಭಜನೆ, ಸಂಜೆ 5ಕ್ಕೆ ಗೊಂದಲಿಗರ ಪದ, ಸಂಜೆ 7ಕ್ಕೆ ಮಂಗಳಾರತಿ, 7.30ಕ್ಕೆ ಗಂಗಾರತಿ ನಡೆಯಲಿದೆ.