ಹೊಸಪೇಟೆ: ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಹಂಪಿ ಬೈ​ಸ್ಕೈಗೆ ಜಿಪಂ ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಳೆದ 15 ದಿನಗಳಿಂದಲೂ ಹಂಪಿಯ ಸುತ್ತಮುತ್ತಲೂ ಉತ್ಸವದ ವಾತಾವರಣ ಸೃಷ್ಟಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಗಸದಿಂದ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಹಂಪಿ ಬೈ​ ಸ್ಕೈ ಆಯೋಜಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ದೇಶ​ವಿದೇಶ ಪ್ರವಾಸಿಗರು, ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಹಂಪಿ ಬೈ ಸ್ಕೈ ಫೆ.12ರಿಂದ ಫೆ.16ರವರೆಗೆ ಇರಲಿದ್ದು, ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಹೆಲಿಕಾಪ್ಟರ್‌ನಲ್ಲಿ ಒಮ್ಮೆಗೆ 5 ಪ್ರಯಾಣಿಕರು ಪ್ರಯಾಣಿಸಬಹುದು. ಬೈ ಸ್ಕೈ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಟೇಕಾಫ್ ಹಾಗೂ ಲ್ಯಾಂಡಿಗ್ ಸಹಿತ 6 ನಿಮಿಷಗಳ ಹಾರಾಟಕ್ಕೆ ₹3999 ನಿಗದಿಪಡಿಸಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಹಂಪಿಯ ಪರಿಸರದ ಸ್ಮಾರಕಗಳು, ತುಂಗಭದ್ರಾ ಜಲಾಶಯ ಹಾಗೂ ಇತರೆ ಸ್ಥಳಗಳನ್ನು ಆಗಸದಿಂದ ನೋಡಬಹುದು. ಫೆ.16ರಂದು ಹೆಲಿಪ್ಯಾಡ್‌ನಲ್ಲಿ ಭಾಗವಹಿಸಲು ಇಚ್ಛಿಸುವ 100 ಪೌರಕಾರ್ಮಿಕರಿಗೆ ವಿಶೇಷ ರಿಯಾಯಿತಿ ದರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿವೇಕಾನಂದ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.