ಹಂಪಿ ಉತ್ಸವ: ಶ್ವಾನ, ಟಗರು, ಎತ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ

| Published : Feb 19 2025, 12:50 AM IST

ಹಂಪಿ ಉತ್ಸವ: ಶ್ವಾನ, ಟಗರು, ಎತ್ತುಗಳ ಪ್ರದರ್ಶನಕ್ಕೆ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಶ್ವಾನ, ಟಗರು, ಎತ್ತುಗಳ ಪ್ರದರ್ಶನಕ್ಕೆ ಕಮಲಾಪುರದ ಹಳೇ ಐಬಿ ಬಳಿ ತಾತ್ಕಾಲಿಕ ಟೆಂಟ್‌ ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಶ್ವಾನ, ಟಗರು, ಎತ್ತುಗಳ ಪ್ರದರ್ಶನಕ್ಕೆ ಕಮಲಾಪುರದ ಹಳೇ ಐಬಿ ಬಳಿ ತಾತ್ಕಾಲಿಕ ಟೆಂಟ್‌ ನಿರ್ಮಾಣ ಮಾಡಲಾಗಿದೆ.

ಹಂಪಿ ಉತ್ಸವದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಇರುವ ಹಿನ್ನೆಲೆ ಉತ್ಸವದಲ್ಲಿ ಗಮನ ಸೆಳೆಯಲು ಶ್ವಾನ, ಟಗರು, ಎತ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನ ಉಡುಪಾಸ್‌ ಸಂಸ್ಥೆಯಿಂದ ಟೆಂಟ್‌ ನಿರ್ಮಾಣ ಮಾಡಲಾಗಿದೆ.

ಹೊಸಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ವಿವಿಧ ಜಾತಿಯ ಶ್ವಾನಗಳನ್ನು ತಂದು ಪ್ರದರ್ಶನ ಮಾಡಲಾಗುತ್ತದೆ. ಜೊತೆಗೆ ಎತ್ತುಗಳ ಪ್ರದರ್ಶನ ಮತ್ತು ಟಗರು ಪ್ರದರ್ಶನ ಕೂಡ ನಡೆಯಲಿದೆ. ಇದಕ್ಕೆ ಆಕರ್ಷಕ ಬಹುಮಾನ ಕೂಡ ಇರಲಿದೆ. ಫೆ.28, ಮಾರ್ಚ್‌ 1 ಮತ್ತು 2ರಂದು ಉತ್ಸವ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.

ಸುಗಮ ಸಂಚಾರಕ್ಕೆ ಪರಿಶೀಲನೆ:

ಹಂಪಿ ಉತ್ಸವಕ್ಕೆ ಹೊಸಪೇಟೆಯಿಂದ ಮೂರು ದಿನವೂ 30 ಬಸ್‌ಗಳನ್ನು ಉಚಿತವಾಗಿ ಬಿಡಲಾಗುತ್ತಿದೆ. ಇನ್ನೂ ಕಂಪ್ಲಿಯಿಂದ 10 ಬಸ್‌ ಬಿಡಲಾಗುತ್ತಿದೆ. ಇನ್ನೂ ಉತ್ಸವಕ್ಕೆ ಬರುವ ಜನರು ಸುಗಮವಾಗಿ ಹಂಪಿಗೆ ತೆರಳಲು ಅಡ್ಡಿ ಆಗದಂತೆ ಸಂಚಾರದ ವ್ಯವಸ್ಥೆಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹೊಸಪೇಟೆಯ ಅನಂತಶಯನಗುಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆದಿರುವ ಹಿನ್ನೆಲೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮವಹಿಸಲು ಪೊಲೀಸರು ಪರಿಶೀಲನೆ ನಡೆಸಿದ್ದು, ಉತ್ಸವಕ್ಕೆ ಜನರು ಬರಲು ಹಾಗೂ ತೆರಳಲು ವ್ಯವಸ್ಥೆ ಮಾಡಲು ಪರಿಶೀಲನೆ ನಡೆಸಿದ್ದಾರೆ.

ಉತ್ಸವದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗದಂತೆ ನಿಗಾವಹಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಈಗಾಗಲೇ ಪಾರ್ಕಿಂಗ್‌ಗೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ರೈತರು ಕೂಡ ಕೃಷಿ ಜಮೀನುಗಳನ್ನು ಪಾರ್ಕಿಂಗ್‌ಗೆ ನೀಡಿದ್ದಾರೆ. ಹಾಗಾಗಿ ಪೊಲೀಸ್‌ ಇಲಾಖೆ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡುತ್ತಿದೆ.

ಹಂಪಿಯಲ್ಲಿ ಪೊಲೀಸರು ಮೂರು ದಿನಗಳು ಕೆಲಸ ನಿರ್ವಹಿಸಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆ ಸೇರಿದಂತೆ ಹೊರ, ಜಿಲ್ಲೆಗಳಿಂದ ಪೊಲೀಸರು ಬರುವ ಹಿನ್ನೆಲೆಯಲ್ಲಿ ಈಗ ತಾತ್ಕಾಲಿಕ ವ್ಯವಸ್ಥೆ ಮಾಡಲು ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಕಲಾವಿದರ ದಂಡು:

ಹಂಪಿ ಉತ್ಸವದಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನಾಲ್ಕು ವೇದಿಕೆಗಳಲ್ಲಿ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಕಲಾ ಪ್ರದರ್ಶನ ವೀಕ್ಷಣೆ ಮಾಡಲು ಲಕ್ಷಾಂತರ ಜನರು ಹಂಪಿಗೆ ಹರಿದು ಬರಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಕಳೆದ ಬಾರಿ ನಡೆದ ಹಂಪಿ ಉತ್ಸವ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಬಾರಿಯೂ ಉತ್ಸವಕ್ಕೆ ಜನರು ಹರಿದು ಬರಲಿದ್ದಾರೆ ಎಂಬ ಲೆಕ್ಕಾಚಾರದೊಂದಿಗೆ ಸಿದ್ಧತೆ ಜೋರಾಗಿ ನಡೆದಿದೆ. ಈಗಾಗಲೇ ಉತ್ಸವಕ್ಕಾಗಿ ರಚನೆ ಮಾಡಲಾಗಿರುವ ವಿವಿಧ ಸಮಿತಿಗಳು ಹಲವು ಸಭೆಗಳನ್ನು ನಡೆಸಿದ್ದು, ರೂಪುರೇಷೆಯೊಂದಿಗೆ ಸಿದ್ಧತೆ ನಡೆದಿದೆ.

ಹಂಪಿ ಉತ್ಸವದ ಸಿದ್ಧತಾ ಕಾರ್ಯವನ್ನು ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಪಂ ಸಿಇಒ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆ ಆಯಾ ಅಧಿಕಾರಿಗಳು ತಮಗೆ ನೀಡಿರುವ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.ಹಂಪಿ ಉತ್ಸವಕ್ಕಾಗಿ ಈಗಾಗಲೇ ಸಿದ್ಧತೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಿ ಹೊಣೆಗಾರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ತಿಳಿಸಿದ್ದಾರೆ.