ಹಂಪಿಯಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳು ಇಲ್ಲ ಎಂದು ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ.13, 14 ಮತ್ತು 15ರಂದು ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ವಿಜಯನಗರ ಸಾಮ್ರಾಜ್ಯದ ಗತ‍ವೈಭವವನ್ನು ಮೆಲುಕು ಹಾಕುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಉತ್ಸವವನ್ನು ಸಹ ಅತ್ಯಂತ ವೈಭವದಿಂದ ಮತ್ತು ಅದ್ಧೂರಿಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹಂಪಿ ಉತ್ಸವದ ನೆಪದಲ್ಲಿಯಾದರೂ ಹಂಪಿಯಲ್ಲಿ ಈಗ ಸ್ವಚ್ಛತಾ ಕಾರ್ಯ ಕೈಗೊಂಡಿದೆ. ಹಂಪಿಯ ಕೆಲ ಸ್ಮಾರಕಗಳ ಬಳಿ ಈಗ ಸ್ವಲ್ಪಮಟ್ಟಿಗೆ ಸ್ವಚ್ಛತಾ ಕಾರ್ಯ ಭರದಿಂದ ನಡೆದಿದೆ.

ಹಂಪಿಯಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳು ಇಲ್ಲ ಎಂದು ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗ ಉತ್ಸವದ ನೆಪದಲ್ಲಿ ಆದರೂ ಸ್ವಚ್ಛತಾ ಕಾರ್ಯ ಸೇರಿದಂತೆ ಕೆಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

ಉತ್ಸವ ನಡೆಯುವ ವೇದಿಕೆಗಳ ಮುಂದೆ ಹಾಗೂ ದಾರಿಯಲ್ಲಿ ಬೆಳೆದು ನಿಂತಿರುವ ಮುಳ್ಳುಗಿಡಗಳನ್ನು ಕಡಿದು ಹಾಕುತ್ತಿದ್ದಾರೆ. ರಸ್ತೆ ಬದಿಯಲ್ಲಿ ಅಥವಾ ಸ್ಮಾರಕಗಳ ಮುಂದೆ ಬಿದ್ದಿರುವ ತಗ್ಗು-ಗುಡ್ಡಿಗಳನ್ನು ಮುಚ್ಚುವಂತಹ ಕಾರ್ಯದಲ್ಲಿ ಕಳೆದ ಕೆಲ ದಿನಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡು ಉತ್ಸವಕ್ಕೆ ಮೆರಗು ನೀಡಲು ಮುಂದಾಗಿದ್ದಾರೆ.

ಜನೋತ್ಸವ ಆಗಲಿ:

ಹಂಪಿ ಉತ್ಸವ ಎಂದರೆ ವೇದಿಕೆಗಳ ನಿರ್ಮಾಣ ಮಾಡುವ ಮತ್ತು ಲೈಟ್‌ ಮತ್ತು ಧ್ವನಿವರ್ಧಕಗಳನ್ನು ಹಾಗೂ ಕುರ್ಚಿಗಳು ಸೇರಿದಂತೆ ಇತರೆ ದೊಡ್ಡ ಡೊಡ್ಡ ಕೆಲಸಗಳನ್ನು ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ದೊಡ್ಡ ನಗರದ ಜನರಿಗೆ ಲಕ್ಷಾಂತರ ರು. ಬಿಲ್‌ ನೀಡಿ ಕಳುಹಿಸುತ್ತಾರೆ. ಆದರೆ ಸ್ಥಳೀಯರಿಗೆ ಸ್ವಚ್ಛಗೊಳಿಸುವ ಕೆಲಸಕ್ಕೆ ಸೀಮಿತಗೊಳಿಸಬಾರದು. ಹಂಪಿ ಉತ್ಸವ ವೇದಿಕೆಗಳ ನಿರ್ಮಾಣದಲ್ಲಿ ಸ್ಥಳೀಯ ಪೇಂಟರ್‌ಗಳನ್ನು, ಕುಶಲಕರ್ಮಿಗಳನ್ನು, ಚಿತ್ರಕಲಾವಿದರನ್ನು, ಧ್ವನಿ ವರ್ಧಕದವರನ್ನು, ಕುಸ್ತಿ ಪಂದ್ಯಾವಳಿಯ ಕುಸ್ತಿ ಅಖಾಡ ನಿರ್ಮಾಣದಲ್ಲಿ, ವಸ್ತು ಪ್ರದರ್ಶನಕ್ಕೆ ಸ್ಟಾಲ್‌, ಪುಸ್ತಕ ಪ್ರದರ್ಶನಕ್ಕೆ ಸ್ಟಾಲ್‌, ಕಲಾವಿದರಿಗೆ ಗ್ರೀನ್‌ ರೂಂಗಳು ನಿರ್ಮಾಣ ಸೇರಿದಂತೆ ಇತರೆ ಕೆಲಸಗಳಿಗೆ ಸ್ಥಳೀಯರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯುತ್‌ ದೀಪಾಲಂಕಾರ ಹಾಕಲಾಗುತ್ತಿದೆ. ಈ ಬಾರಿ ಹೊಸಪೇಟೆ ನಗರದಿಂದ ಕಮಲಾಪುರ ಮಾರ್ಗವಾಗಿ ಹಂಪಿಗೆ ಹೋಗುವ ರಸ್ತೆಯುದ್ದಕ್ಕೂ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಹಂಪಿ ಉತ್ಸವಕ್ಕೆ ದಾರಿಯಲ್ಲಿ ಬರುವ ಜನರಿಗೆ ರಾತ್ರಿ ಸಮಯದಲ್ಲಿ ಹಂಪಿಯ ಸ್ಮಾರಕಗಳನ್ನು ಮತ್ತು ಹಂಪಿಯ ವೈಭವವನ್ನು ಕಣ್ಣುತ್ತುಂಬಿಸಿಕೊಳ್ಳಲು ಅನುಕೂಲವಾಗುತ್ತದೆ. ಹಂಪಿಯ ದಾರಿ ಉದ್ದಕ್ಕೂ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ನಿರ್ಮಾಣ ಕಾರ್ಯ ಸಹ ನಗರದಲ್ಲಿ ಭರದಿಂದ ನಡೆಯುತ್ತಿದೆ.

ಈ ಬಾರಿ ಜಿಲ್ಲಾಡಳಿತ ಹಂಪಿ ಉತ್ಸವದಲ್ಲಿ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ ಎಲ್‌ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.