ಹಂಪಿ ಉತ್ಸವ: ಭರದಿಂದ ಸಾಗಿರುವ ವೇದಿಕೆ ನಿರ್ಮಾಣ ಕಾರ್ಯ

| Published : Feb 17 2025, 12:33 AM IST

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಪ್ರಧಾನ ವೇದಿಕೆ ಹಾಗೂ ಎರಡನೇ ಸಮನಾಂತರ ವೇದಿಕೆ ಕಾರ್ಯವೂ ಆರಂಭಿಸಲಾಗಿದೆ.

ಹಂಪಿ ಉತ್ಸವ ಫೆಬ್ರವರಿ 28 ಮತ್ತು ಮಾರ್ಚ್‌ 1 ಮತ್ತು 2ರಂದು ನಡೆಯಲಿದ್ದು, ಉತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಜಯನಗರ ಜಿಲ್ಲಾಡಳಿತ ಈಗಾಗಲೇ ಬೆಂಗಳೂರಿನ ಉಡುಪಾಸ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ ವೇದಿಕೆ ನಿರ್ಮಾಣ ಕಾರ್ಯದ ಹೊಣೆ ವಹಿಸಿದ್ದು, ಹಂಪಿಯ ಪ್ರಕಾಶ್‌ನಗರದ ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಸಾಗಿದೆ. ಈ ವೇದಿಕೆಗೆ ಹಂಪಿ ಉತ್ಸವದ ರೂವಾರಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಹೆಸರಿನಲ್ಲಿಡಲಾಗುತ್ತಿದೆ. ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಈ ವೇದಿಕೆ ನಿರ್ಮಿಸಲಾಗುತ್ತಿದೆ.

70 ಸಾವಿರ ಕುರ್ಚಿಗಳು:

ಹಂಪಿ ಉತ್ಸವಕ್ಕಾಗಿ ಪ್ರಧಾನ ವೇದಿಕೆಯ ಮುಭಾಂಗದಲ್ಲಿ 70 ಸಾವಿರ ಕುರ್ಚಿಗಳನ್ನು ಅಳವಡಿಸಲಾಗುತ್ತಿದೆ. ಈ 70 ಸಾವಿರ ಆಸನಗಳಲ್ಲಿ ಸಾರ್ವಜನಿಕರು, ಗಣ್ಯಾತಿಗಣ್ಯರು, ಗಣ್ಯರು ಆಗಮಿಸಿ ಮೂರು ದಿನಗಳ ಉತ್ಸವ ವೀಕ್ಷಣೆ ಮಾಡಲಿದ್ದಾರೆ. ಈ ಬಾರಿ ಹಂಪಿ ಉತ್ಸವದ ವೀಕ್ಷಣೆಗೆ ಜನರು ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಉತ್ಸವಕ್ಕೆ ಭರದ ಸಿದ್ಧತೆಯೂ ನಡೆದಿದೆ.

ಉತ್ಸವದಲ್ಲಿ ಹೆಸರಾಂತ ಕಲಾವಿದರು ಆಗಮಿಸುವ ಹಿನ್ನೆಲೆಯಲ್ಲಿ ಸಂಗೀತಪ್ರಿಯರು, ಸಿನಿ ಕಲಾವಿದರ ಅಭಿಮಾನಿಗಳು ಉತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಎಣಿಕೆ ಹಾಕಲಾಗಿದೆ. ಈ ಉತ್ಸವ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರಲಿದೆ. ಹಾಗಾಗಿ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬರುವ ಸಾಧ್ಯತೆ ಇದೆ.

ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಎರಡನೇ ಸಮನಾಂತರ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ವಿಜಯನಗರ ಅರಸರ ಕಾಲದ ಈ ಶಾಶ್ವತ ವೇದಿಕೆಯ ಮುಭಾಂಗ 10 ಸಾವಿರ ಕುರ್ಚಿಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೇ ಈ ವೇದಿಕೆ ಸರಿಹೊಂದುವಂತೆ ಲೈಟಿಂಗ್‌ ಕಲ್ಪಿಸಲಾಗುತ್ತಿದೆ.

ಹಂಪಿ ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸಲಿದ್ದಾರೆ. ಕಲಾವಿದರ ದಂಡೇ ಉತ್ಸವ ವೀಕ್ಷಣೆಗೆ ಆಗಮಿಸುವ ಹಿನ್ನೆಲೆಯಲ್ಲಿ ಈ ಉತ್ಸವ ಜನರನ್ನು ಸೆಳೆಯಲಾರಂಭಿಸಿದೆ.

ಈ ಮಧ್ಯೆ ಈ ಬಾರಿ ಯೋಗಕ್ಕೆ ಆದ್ಯತೆ ನೀಡಲು, ಹಂಪಿಯ ವಿಜಯ ವಿಠಲ ದೇವಾಲಯದ ಆವರಣದಲ್ಲಿ ಯೋಗಪಟುಗಳು ಯೋಗಾಸ ಮಾಡಲು ಅವಕಾಶ ಕೂಡ ನೀಡಲಾಗುತ್ತಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಉತ್ಸವ ಗಮನ ಸೆಳೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.