ಹಂಪಿ ಸಂಚಾರ ಪೊಲೀಸ್ ಠಾಣೆ ಬಳಿಯ ಗಾಯತ್ರಿ ಪೀಠ ವೇದಿಕೆಯಿಂದ ಆರಂಭವಾದ ಓಟದಲ್ಲಿ 1000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಹೊಸಪೇಟೆ: ಪರಂಪರೆ, ಪ್ರವಾಸೋದ್ಯಮ ಹಾಗೂ ಫಿಟ್ನೆಸ್ ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಹಂಪಿ ಗೋ ಹೆರಿಟೇಜ್ ರನ್‌ಗೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಭಾನುವಾರ ಚಾಲನೆ ನೀಡಿದರು.

ಹಂಪಿ ಸಂಚಾರ ಪೊಲೀಸ್ ಠಾಣೆ ಬಳಿಯ ಗಾಯತ್ರಿ ಪೀಠ ವೇದಿಕೆಯಿಂದ ಆರಂಭವಾದ ಓಟದಲ್ಲಿ 1000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಓಟಗಾರರು ಶ್ರೀಕೃಷ್ಣ ದೇವಸ್ಥಾನ, ಕೃಷ್ಣ ಬಜಾರ್, ಚಂಡಿಕೇಶ್ವರ ಗುಡಿ, ಶಿವ ದೇವಾಲಯ, ರಾಣಿ ಸ್ನಾನಗೃಹ ಹಾಗೂ ತಳವಾರ ಘಟ್ಟ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಓಟ ಪೂರ್ಣಗೊಳಿಸಿದರು.

ಹಂಪಿ, ಹೊಸಪೇಟೆ, ಬಳ್ಳಾರಿ, ಗಂಗಾವತಿ, ಕಂಪ್ಲಿ ಸೇರಿದಂತೆ ಸ್ಥಳೀಯರು ಭಾಗವಹಿಸುವುದರ ಜತೆಗೆ ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ನವದೆಹಲಿ, ದಾವಣಗೆರೆ, ತಿರುಪತಿ ಮೊದಲಾದ ನಗರಗಳಿಂದಲೂ ಓಟಗಾರರು ಆಗಮಿಸಿದ್ದರು. ಬೆಂಗಳೂರಿನಿಂದ 300, ಹೈದರಾಬಾದ್‌ನಿಂದ 175 ಹಾಗೂ ಹಂಪಿ–ಹೊಸಪೇಟೆ ಪ್ರದೇಶದಿಂದ 350 ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 8 ವರ್ಷದ ಕಿರಿಯ ಹಾಗೂ 77 ವರ್ಷದ ಹಿರಿಯ ಓಟಗಾರರು ಭಾಗವಹಿಸಿ ಗಮನ ಸೆಳೆದರು. ಓಟದ ಮಾರ್ಗದಲ್ಲಿ ಪ್ರತಿ 2ರಿಂದ 2.5 ಕಿಲೋಮೀಟರ್‌ಗೆ ನೀರು, ಎಲೆಕ್ಟ್ರೋಲೈಟ್‌ಗಳು ಹಾಗೂ ಲಘು ಉಪಾಹಾರಗಳನ್ನು ಒದಗಿಸಲಾಗಿತ್ತು. ಓಟವನ್ನು ಪೂರ್ಣಗೊಳಿಸಿದ ಎಲ್ಲರಿಗೂ ಪದಕ, ಪ್ರಮಾಣಪತ್ರ ಹಾಗೂ ಉಪಾಹಾರ ವಿತರಿಸಲಾಯಿತು.

ಎಸ್ಪಿ ಎಸ್‌. ಜಾಹ್ನವಿ, ಎಂಎಸ್‌ಪಿಎಲ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಲ್ಡೋಟಾ, ಶಾಸಕರ ಪುತ್ರ ಎಚ್‌.ಜಿ. ಗುರುದತ್, ಹಂಪಿಯ ಬೌಲ್ಡರ್ಸ್ ರೆಸಾರ್ಟ್‌ನ ಅನ್ನಪೂರ್ಣಾ, ಹೊಸಪೇಟೆ ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷ ಅಮಿತ್ ಜೈನ ಮತ್ತಿತರರಿದ್ದರು.