ವಿಶ್ವಕ್ಕೆ ಏಕತೆ ಸಂದೇಶ ಸಾರಿದ ಹಂಪಿ ಹೋಳಿ ಸಂಭ್ರಮ

| Published : Mar 27 2024, 01:00 AM IST

ಸಾರಾಂಶ

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿ ಹಾಗೂ ಜನತಾ ಪ್ಲಾಟ್‌ನಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು. ರಥಬೀದಿಯಲ್ಲಿ ಮಾ. 25ರ ಮಧ್ಯರಾತ್ರಿ ಕಾಮದಹನ ಮಾಡಿದ ದೇಶ-ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ದೇಶ, ಭಾಷೆ, ಗಡಿ ಮೀರಿ ದೇಶ-ವಿದೇಶಿ ಪ್ರವಾಸಿಗರು ಒಂದೇಡೆ ಸೇರಿ ಮಂಗಳವಾರ ಹೋಳಿಹಬ್ಬವನ್ನಾಚರಿಸಿದರು. ಬಣ್ಣದೋಕುಳಿಯಲ್ಲಿ ಮಿಂದೆದ್ದ ದೇಶ-ವಿದೇಶಿ ಪ್ರವಾಸಿಗರು ಇಡೀ ವಿಶ್ವಕ್ಕೆ ಏಕತೆ ಸಂದೇಶ ರವಾನಿಸಿದರು.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿ ಹಾಗೂ ಜನತಾ ಪ್ಲಾಟ್‌ನಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು. ರಥಬೀದಿಯಲ್ಲಿ ಮಾ. 25ರ ಮಧ್ಯರಾತ್ರಿ ಕಾಮದಹನ ಮಾಡಿದ ದೇಶ-ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದರು. ಮಾರನೇ ದಿನ ಬೆಳಗ್ಗೆ 9 ಗಂಟೆಗೆ ಹೊತ್ತಿಗೆ ಜಮಾಯಿಸಿ ಬಣ್ಣದೋಕುಳಿಗೆ ರಂಗೇರಿಸಿದರು.

ಹ್ಯಾಪಿ ಹೋಳಿ

ದೇಶ-ವಿದೇಶಿ ಪ್ರವಾಸಿಗರು ಸ್ಥಳೀಯರೊಡಗೂಡಿ ಹ್ಯಾಪಿ ಹೋಳಿ ಎಂದು ಹೇಳುತ್ತಾ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಮಕ್ಕಳಂತೂ ವಿದೇಶಿ ಪ್ರವಾಸಿಗರ ಮೇಲೆ ಬಣ್ಣ ಎರಚಿದರು. ಮರು ಬಣ್ಣ ಎರಚಿದ ವಿದೇಶಿಗರು ಹ್ಯಾಪಿ ಹೋಳಿ ಎಂದು ನುಗುನಗುತ್ತಲೇ ಬಣ್ಣ ಹಾಕಿದರು. ವಿದೇಶಿ ಪ್ರವಾಸಿಗರ ಜೊತೆಗೆ ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ದೇಶಿ ಪ್ರವಾಸಿಗರು ಕೂಡ ರಂಗಿನಾಟದಲ್ಲಿ ತೊಡಗಿದರು. ಅದರಲ್ಲೂ ತೆಲಂಗಾಣ, ಆಂಧ್ರಪ್ರದೇಶ, ದಿಲ್ಲಿ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನ ಪ್ರವಾಸಿಗರು ಕೂಡ ಮೈಚಳಿ ಬಿಟ್ಟು ಬಣ್ಣದಾಟದಲ್ಲಿ ತೊಡಗಿದರು.

ವಿವಿಧ ದೇಶಗಳ ಪ್ರವಾಸಿಗರು

ಹಂಪಿಯ ಹೋಳಿಹಬ್ಬದ ಸಂಭ್ರಮದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ರಷ್ಯಾ. ಕಜಕಿಸ್ತಾನ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಇಸ್ರೇಲ್‌, ಇಟಲಿ ಸ್ಪೇನ್‌, ಸ್ವೀಝರ್‌ಲ್ಯಾಂಡ್‌, ಜಪಾನ್‌ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಭಾಗಿಯಾಗಿದ್ದರು. ಹಂಪಿಯ ಹೋಳಿ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ಭಾಗಿಯಾಗಿದ್ದೇವೆ. ಇಂತಹ ಸಂಭ್ರಮವನ್ನು ನಾವು ನೋಡಿರಲಿಲ್ಲ. ನಾವೇ ಈಗ ಭಾಗಿಯಾಗಿರುವುದು ಇನ್ನಷ್ಟು ಖುಷಿ ತಂದಿದೆ. ಮಕ್ಕಳು, ಯುವಕರು, ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣದಾಟದಲ್ಲಿ ಭಾಗಿಯಾಗಿದ್ದು ಖುಷಿ ತಂದಿತು ಎಂದು ಹೇಳುತ್ತಾರೆ ಇಂಗ್ಲೆಂಡ್‌ನ ಜೋಯಿ, ಜೆನ್ನಿ ದಂಪತಿ.

ತಮಟೆ ನಾದಕ್ಕೆ ಕುಣಿತ

ಹಂಪಿಯ ಜನತಾ ಪ್ಲಾಟ್‌ ಹಾಗೂ ಶ್ರೀವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಸ್ಥಳೀಯರ ತಮಟೆ ನಾದಕ್ಕೆ ವಿದೇಶಿ ಪ್ರವಾಸಿಗರು ಹೆಜ್ಜೆ ಹಾಕಿದರು. ತಮಟೆ ನಾದಕ್ಕೆ ಭರ್ಜರಿ ಸ್ಟೇಪ್‌ ಹಾಕಿದ ವಿದೇಶಿಗರು ಹ್ಯಾಪಿ ಹೋಳಿ ಎಂದು ಸಂಭ್ರಮಿಸುತ್ತಾ ಹಬ್ಬಕ್ಕೆ ಮೆರಗು ತಂದರು. ಹಂಪಿಯ ಹೋಳಿ ಸಂಭ್ರಮದಲ್ಲಿ ಜಗತ್ತಿನ ವಿವಿಧ ದೇಶಗಳ ಜನರು ಪಾಲ್ಗೊಂಡು ಇಡೀ ವಿಶ್ವಕ್ಕೆ ಭಾತೃತ್ವದ ಸಂದೇಶ ರವಾನಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು.

ಅದ್ಭುತ

ಹಂಪಿಯಲ್ಲಿ ಬಣ್ಣದಾಟ ಇದೇ ಎಂಬುದು ಗೊತ್ತಿರಲಿಲ್ಲ. ನನ್ನ ಗೈಡ್‌ನಿಂದ ನನಗೆ ತಿಳಿಯಿತು. ನಾನು ಖುಷಿಯಿಂದ ಭಾಗವಹಿಸಿರುವೆ. ಇಂತಹ ಅದ್ಭುತ ಹಬ್ಬದಲ್ಲಿ ಪಾಲ್ಗೊಂಡಿದ್ದು, ನಿಜಕ್ಕೂ ಅವೀಸ್ಮರಣಿಯ.

- ಟಾಮ್‌, ಆಸ್ಟ್ರೇಲಿಯಾ ಪ್ರವಾಸಿಗ.

ಅನುಕರಣೀಯ

ಹಂಪಿಯಲ್ಲಿ ಜಗತ್ತಿಗೆ ಶಾಂತಿ, ಸಾಮರಸ್ಯ ಹಾಗೂ ಏಕತೆ ಸಂದೇಶ ಸಾರುವ ಹೋಳಿ ಹಬ್ಬ ಆಚರಣೆ ಮಾಡಿರುವುದು ನಿಜಕ್ಕೂ ಅನುಕರಣೀಯ. ಹೋಳಿ ಹಬ್ಬದ ಬಣ್ಣದಾಟ ಎಲ್ಲರನ್ನೂ ಒಂದು ಮಾಡುತ್ತದೆ. ಈ ಹಬ್ಬವನ್ನು ಎಂದಿಗೂ ಮರೆಯುವುದಿಲ್ಲ.

- ಮೇರಿ ಫ್ರಾನ್ಸ್‌ ಪ್ರವಾಸಿ.