ಸಾರಾಂಶ
ಹೊಸಪೇಟೆ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವ ಮಾದರಿಯಲ್ಲಿ ಹಂಪಿ ಉತ್ಸವವನ್ನು ಫೆ. 2, 3 ಮತ್ತು 4ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು. ಈ ಉತ್ಸವವನ್ನು ಜನೋತ್ಸವವನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 2ರಿಂದ ಮೂರು ದಿನಗಳ ಕಾಲ ನಿಗದಿಯಾದ ಐತಿಹಾಸಿಕ ಹಂಪಿ ಉತ್ಸವವನ್ನು ಜನಮಾನಸದ ನಿರೀಕ್ಷೆಯಂತೆ ನಡೆಸಲು ಅಗತ್ಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದೇವೆ.
ಫೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದು, ಮೂರು ದಿನ ಫ್ಯಾಶನ್ ಶೋ, ಡಿಸ್ಕೋರಹಿತ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲಿದೆ ಎಂದರು.
ಉತ್ಸವಕ್ಕೆ ವಿವಿಧ ಸಮಿತಿ: ಜಿಲ್ಲೆಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳ ಸಲಹೆ ಪಡೆದು ಉತ್ಸವಕ್ಕೆ ಸಿದ್ಧತೆ ಮಾಡಲಾಗುವುದು. ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ನಡೆಯುವ ಉತ್ಸವ ಇದಾಗಿದ್ದು, ಭರತನಾಟ್ಯ, ಶಾಸ್ತ್ರೀಯ ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ, ರಾಜ್ಯ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಬೃಹತ್ ವೇದಿಕೆಗಳು: ಹಂಪಿ ಉತ್ಸವಕ್ಕೆ ಗಾಯತ್ರಿಪೀಠ, ಎದುರು ಬಸವಣ್ಣ ಮಂಟಪ, ವಿರೂಪಾಕ್ಷೇಶ್ವರ ದೇವಾಲಯ ಮತ್ತು ಸಾಸಿವೆ ಕಾಳು ಗಣಪತಿ ಮಂಟಪದ ಬಳಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ಆಲೋಚಿಸಲಾಗಿದೆ. ಜತೆಗೆ ಧ್ವನಿ ಮತ್ತು ಬೆಳಕು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಐತಿಹಾಸಿಕ ಉತ್ಸವಕ್ಕೆ ಸ್ವಯಂಪ್ರೇರಣೆಯಿಂದ ಆಗಮಿಸಲು ಇಚ್ಛಿಸುವ ಖ್ಯಾತ ಗಾಯಕರನ್ನು ಕರೆತರುವ ಯೋಜನೆ ಇದೆ. ಹಂಪಿ ಉತ್ಸವದಲ್ಲಿ ಪ್ರತಿ ಬಾರಿ ಸಾಂಪ್ರದಾಯಿಕವಾಗಿ ನಡೆಸುವ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕುಸ್ತಿ ಹಾಗೂ ಗುಂಡು ಎತ್ತುವ ಸ್ಪರ್ಧೆ ಸೇರಿದಂತೆ ಎಲ್ಲ ಬಗೆಯ ಸ್ಪರ್ಧೆಗಳಿಗೆ ಉತ್ಸವದಲ್ಲಿ ಅವಕಾಶ ಇರಲಿದೆ ಎಂದರು.
ಈ ಉತ್ಸವವು ಎಲ್ಲರನ್ನೊಳಗೊಳ್ಳುವ ನಿಟ್ಟಿನಲ್ಲಿ 25 ದಿನ ನಿರಂತರ ಪ್ರಚಾರ ಮಾಡುತ್ತೇವೆ. ಉತ್ಸವಕ್ಕೆ ತಡವಾಗಿ ದಿನಾಂಕ ಘೋಷಣೆಯಾದರೂ ಉತ್ಸವವನ್ನು ಯಶಸ್ವಿ ಮಾಡುತ್ತೇವೆ ಎಂದರು.
ಪುಸ್ತಕ ಮೇಳ: ಹಂಪಿಯ ಇತಿಹಾಸದಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಕಿರೀಟವಿದ್ದಂತೆ. ವಿಶ್ವ ವಿದ್ಯಾಲಯದ ಕುಲಪತಿಗಳು ಸೇರಿದಂತೆ ಅಲ್ಲಿನ ಎಲ್ಲ ವಿಭಾಗಗಳ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಪುಸ್ತಕ ಮೇಳ ಸೇರಿದಂತೆ ವಿಭಿನ್ನ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ರೈತರಿಗಾಗಿ ಕೃಷಿ ಪ್ರದರ್ಶನ, ಸಿರಿಧಾನ್ಯ ಮೇಳ ನಡೆಸಲಾಗುವುದು. ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಮಹಿಳೆಯರಿಗಾಗಿ ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಬಸ್ ವ್ಯವಸ್ಥೆ: ಹಂಪಿ ಉತ್ಸವಕ್ಕೆ 80ರಿಂದ 100 ಬಸ್‌ಗಳನ್ನು ಸ್ಥಳೀಯರಿಗೆಂದೇ ಮೀಸಲಿಟ್ಟು ಜನರನ್ನು ಸೇರಿಸಲಾಗುವುದು. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಹಯೋಗದೊಂದಿಗೆ ಶಾಲಾ, ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಸಹಾಯಕ ಆಯುಕ್ತ ಮಹದ್ ಅಲಿ ಅಕ್ರಂ ಶಾ ಇದ್ದರು.
ಉತ್ಸವಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಒತ್ತಾಯ: ಹಂಪಿ ಉತ್ಸವವನ್ನು ನವೆಂಬರ್ ಮಾಹೆಯಲ್ಲಿ ಆಚರಿಸಬೇಕಾಗಿತ್ತು. ಆದರೆ, ಕರ್ನಾಟಕ 50ರ ಸಂಭ್ರಮ ಜ್ಯೋತಿ ರಥಯಾತ್ರೆ, ಬರಗಾಲದ ಹಿನ್ನೆಲೆಯಲ್ಲಿ ಉತ್ಸವ ಆಚರಿಸಲು ಸಾಧ್ಯವಾಗಲಿಲ್ಲ. ಆದರೆ, ಪ್ರತಿವರ್ಷ ನವೆಂಬರ್ 3,4 ಮತ್ತು 5ರಂದು ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಬಜೆಟ್‌ನಲ್ಲಿ ಹಣ ಮೀಸಲಿಡಲು ಒತ್ತಾಯಿಸುವೆ ಎಂದು ಶಾಸಕ ಎಚ್. ಆರ್. ಗವಿಯಪ್ಪ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಹಂಪಿ ಉತ್ಸವವು ಹಿರಿಯರಾದ ಎಂ.ಪಿ. ಪ್ರಕಾಶ್ ಅವರ ಕನಸಿನ ಮತ್ತು ದೂರದೃಷ್ಟಿಯ ಕಾರ್ಯಕ್ರಮವಾಗಿದೆ. ಅದರಂತೆ ಮುಖ್ಯಮಂತ್ರಿಗಳು, ಕಲಾವಿದರು ಮತ್ತು ಕಲೆಯ ಉಳಿವಿನ ನಿಟ್ಟಿನಲ್ಲಿ ಆಲೋಚಿಸಿ ಹಂಪಿ ಉತ್ಸವವನ್ನು ನೆರವೇರಿಸಲು ಸಮ್ಮತಿಸಿದ್ದಾರೆ.
ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಆಶಯದಂತೆ ಮತ್ತು ಜಿಲ್ಲೆಯ ಸಮಸ್ತ ಜನರ ನಿರೀಕ್ಷೆಯಂತೆ ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿ ಯಶಸ್ವಿಯಾಗಿ ನಡೆಸಲಾಗುವುದು ಎಂದರು. ಈ ಬಾರಿ ಹಂಪಿ ಉತ್ಸವದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲು ಆಲೋಚಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಆದ್ಯತೆ ನೀಡಲಾಗುವುದು ಎಂದರು.
ಕಾರಿಗನೂರು ಪ್ರದೇಶದಲ್ಲಿ ಕಲುಷಿತ ನೀರಿನಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಎಚ್.ಆರ್. ಗವಿಯಪ್ಪನವರು, ಈಗಾಗಲೇ ಜಿಲ್ಲಾಧಿಕಾರಿಯವರು ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ನೀರು ಕ್ಲೋರಿನ್ ಆಗದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ನಗರದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಡಿಎಂಎಫ್ ಅನುದಾನದಡಿಯಲ್ಲಿ ಕಾಮಗಾರಿ ಕೂಡ ಕೈಗೊಳ್ಳಲಾಗಿದೆ. ಹೊಸದಾಗಿ ಟ್ಯಾಂಕರ್‌ಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲಾಗುವುದು ಎಂದರು.