ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿ ಉತ್ಸವದಲ್ಲಿ ವಿಜಯನಗರ ಗತವೈಭವ ಮರುಕಳಿಸಲು ಸಜ್ಜಾಗಿರುವ ವಿಜಯನಗರ ಜಿಲ್ಲಾಡಳಿತ ಈಗ ಸದ್ದಿಲ್ಲದೇ ಶಿಲ್ಪಕಲಾ ಶಿಬಿರ ಆಯೋಜನೆ ಮಾಡಿದ್ದು, ಹತ್ತು ಜನ ಶಿಲ್ಪಿಗಳು ವಿವಿಧ ಬಗೆಯ ಶಿಲ್ಪಗಳನ್ನು ಹಂಪಿಯಲ್ಲಿ ಅರಳಿಸುತ್ತಿದ್ದಾರೆ. ಈ ಶಿಲ್ಪಗಳನ್ನು ಉತ್ಸವದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಈ ಮೂಲಕ ಶಿಲ್ಪಕಲೆಯನ್ನು ಪ್ರಚುರಪಡಿಸಲಾಗುತ್ತಿದೆ.ಹಂಪಿ ಉತ್ಸವ ಫೆಬ್ರವರಿ 2, 3, 4ರಂದು ನಡೆಯಲಿದೆ. ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ. 2ರಂದು ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ ಹಂಪಿಯ ಗಜಶಾಲೆ ಆವರಣದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕೂಡ ನಡೆಯಲಿದೆ. ಈ ಮಧ್ಯೆ ನಾಡಿನ ಕಲಾ ಪ್ರಪಂಚವನ್ನು ಜಗತ್ತಿಗೆ ಉಣಬಡಿಸಲು ಶಿಲ್ಪಕಲಾ ಶಿಬಿರ ಆಯೋಜನೆ ಮಾಡಲಾಗಿದೆ. ಇನ್ನೂ ವಿಜಯನಗರ ವಾಸ್ತುಶಿಲ್ಪ ಶೈಲಿ, ಚಾಲುಕ್ಯ ಶೈಲಿ ಮತ್ತು ಹೊಯ್ಸಳ ಶೈಲಿಗಳಲ್ಲಿ ಶಿಲ್ಪಿಗಳು ಶಿಲ್ಪಗಳನ್ನು ಅರಳಿಸುತ್ತಿದ್ದಾರೆ. ಹಾಗಾಗಿ ಹಂಪಿಯಲ್ಲಿ ವಿಜಯನಗರದ ಗತವೈಭವ ಮರುಕಳಿಸುವ ಕಾರ್ಯ ನಡೆದಿದೆ. ಜನವರಿ 31ರ ವರೆಗೆ ಶಿಲ್ಪಿಗಳು ಶಿಲ್ಪಗಳನ್ನು ಕೆತ್ತನೆ ಮಾಡಲಿದ್ದಾರೆ.
ಶಿಲ್ಪಗಳ ಕೆತ್ತನೆ: ಹಂಪಿ ಉತ್ಸವದ ನಿಮಿತ್ತ ಹತ್ತು ಶಿಲ್ಪಿಗಳು ಮೈಸೂರಿನಿಂದ ಆಗಮಿಸಿದ್ದು, ಕೃಷ್ಣ ಶಿಲೆಯಲ್ಲಿ ಶಿಲ್ಪಗಳನ್ನು ಅರಳಿಸುತ್ತಿದ್ದಾರೆ. ಇವರು ಕೆತ್ತನೆ ಮಾಡುತ್ತಿರುವ ಶಿಲ್ಪಗಳನ್ನು ಹಂಪಿ ಉತ್ಸವದಲ್ಲಿ ಆಗಮಿಸುವ ಲಕ್ಷಾಂತರ ಜನರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಈ ಶಿಲ್ಪಿಗಳು ನಾಜೂಕಾಗಿ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದಾರೆ. ಶಿಲ್ಪಿಗಳು ವಿವಿಧ ಶೈಲಿಯಲ್ಲಿ ಈ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದಾರೆ. ಈಗಾಗಲೇ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಈ ಶಿಲ್ಪ ಶಿಬಿರಕ್ಕೆ ಚಾಲನೆ ನೀಡಿದ್ದಾರೆ. ಶಿಲ್ಪಿಗಳು ಕೂಡ ಈ ಕಲೆಗೆ ಹಂಪಿ ಉತ್ಸವದಲ್ಲಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಖುಷಿಯಾಗಿದ್ದಾರೆ.ವಿವಿಧ ಶೈಲಿಯ ಶಿಲ್ಪ: ಹೊಸಪೇಟೆಯ ಮಲಪನಗುಡಿಯ ಕೊಟ್ರೇಶ್ ಆಚಾರ್ ವಿಜಯನಗರ ವಾಸ್ತು ಶಿಲ್ಪಶೈಲಿಯಲ್ಲಿ ಉಗ್ರ ನರಸಿಂಹನ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಹೊಸಪೇಟೆಯ ಅನಂತಶಯನಗುಡಿ ಗ್ರಾಮದ ವಿನೋದ್ ಚಾಲುಕ್ಯ ಶೈಲಿಯಲ್ಲಿ ಗಂಧರ್ವ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಕೊಟ್ಟೂರಿನ ಉಜ್ಜಯಿನಿಯ ಅವಿನಾಶ್ ಚಾಲುಕ್ಯ ಶೈಲಿಯಲ್ಲಿ ದೇವಿ ವಿಗ್ರಹ ಅರಳಿಸುತ್ತಿದ್ದಾರೆ. ಹೂವಿನಹಡಗಲಿಯ ದೊಡ್ಡ ಬಸವರಾಜ ಹೊಯ್ಸಳ ಶೈಲಿಯಲ್ಲಿ ನೃತ್ಯಗಾರ್ತಿ ಶಿಲ್ಪ ಅರಳಿಸುತ್ತಿದ್ದಾರೆ.
ರಾಯಚೂರಿನ ಲಿಂಗಸ್ಗೂರಿನ ಶಿಲ್ಪಿ ಮೌನೇಶ್ ಚಾಲುಕ್ಯ ಶೈಲಿಯಲ್ಲಿ ನಾಟ್ಯ ಗಣಪತಿ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಹೂವಿನಹಡಗಲಿ ಇಟಗಿಯ ಪ್ರಕಾಶ್ ಹೊಯ್ಸಳ ಶೈಲಿಯಲ್ಲಿ ಸರಸ್ವತಿ ವಿಗ್ರಹ ಅರಳಿಸುತ್ತಿದ್ದಾರೆ. ಹಂಪಿ ಪಕ್ಕದ ಕಡ್ಡಿರಾಂಪುರ ಕ್ರಾಸ್‌ನ ಶಿಲ್ಪಿ ವೀರೇಶ್ ವಿಜಯನಗರ ಶೈಲಿಯಲ್ಲಿ ಲಂತಾಂಗಿ ಶಿಲ್ಪ ಕೆತ್ತನೆ ಮಾಡುತ್ತಿದ್ದಾರೆ.ಹಗರಿಬೊಮ್ಮನಹಳ್ಳಿಯ ಪಂಪಾಪತಿ ಗೌತಮಬುದ್ಧನ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ. ಹೊಸಪೇಟೆಯ ಮರಿಯಮ್ಮನಹಳ್ಳಿ ತಾಂಡಾದ ಕೃಷ್ಣ ನಾಯ್ಕ ಹೊಯ್ಸಳ ಶೈಲಿಯಲ್ಲಿ ಸೂರ್ಯದೇವ ವಿಗ್ರಹ ಅರಳಿಸುತ್ತಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡದ ಮುತ್ತುರಾಜ ಚಾಲುಕ್ಯ ಶೈಲಿಯಲ್ಲಿ ಅವಲೋಕೇಶ್ವರನ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ.ವಿವಿಧ ಶೈಲಿ: ಹಂಪಿ ಉತ್ಸವದಲ್ಲಿ ಶಿಲ್ಪಕಲೆಗೆ ಆದ್ಯತೆ ನೀಡಲಾಗಿದೆ. ಇದರ ದ್ಯೋತಕವಾಗಿ ಶಿಲ್ಪಕಲಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಹತ್ತು ಜನ ಶಿಲ್ಪಿಗಳು ವಿವಿಧ ಶೈಲಿಯಲ್ಲಿ ಕೃಷ್ಣ ಶಿಲೆಯಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದೇವೆ. ಉತ್ಸವದಲ್ಲಿ ಪ್ರದರ್ಶನಕ್ಕೂ ಆಯೋಜನೆ ಮಾಡಲಾಗುತ್ತಿದೆ ಎಂದು ಶಿಲ್ಪಿ ಕೊಟ್ರೇಶ್ ಆಚಾರ್ ತಿಳಿಸಿದರು.