ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಐತಿಹಾಸಿಕ ಹಂಪಿಯ ಸ್ಮಾರಕಗಳನ್ನು ನಾಡಿನ ವಿವಿಧೆಡೆಯಿಂದ ಆಗಮಿಸಿರುವ ಚಿತ್ರಕಲಾವಿದರು ಜಲವರ್ಣದಲ್ಲಿ ಅರಳಿಸುತ್ತಿದ್ದಾರೆ. ಕುಂಚ ಹಿಡಿದು, ಸ್ಮಾರಕಗಳ ಎದುರು ಕಲಾವಿದರು ಚಿತ್ರ ಬಿಡಿಸುತ್ತಿದ್ದಾರೆ.ಹಂಪಿಯಲ್ಲಿ ಬೀಡುಬಿಟ್ಟಿರುವ ಚಿತ್ರ ಕಲಾವಿದರು, ಸ್ಮಾರಕಗಳ ಎದುರು ಕುಳಿತು ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಮಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿರುವ 22ಕ್ಕೂ ಹೆಚ್ಚು ಕಲಾವಿದರು ಕುಂಚದಲ್ಲಿ ಹಂಪಿಯ ಸ್ಮಾರಕಗಳನ್ನು ಅರಳಿಸುತ್ತಿದ್ದಾರೆ.ಈ ಕಲಾವಿದರು ಯಾರು?: ರಾಜ್ಯದ ವಿವಿಧೆಡೆಯಲ್ಲಿರುವ ಜಲವರ್ಣದಲ್ಲಿ ಆಸಕ್ತಿ ಹೊಂದಿರುವ ಚಿತ್ರ ಕಲಾವಿದರು "ಫ್ರೆಂಡ್ಲಿ " ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಸೃಜಿಸಿಕೊಂಡಿದ್ದಾರೆ. ಈ ಕಲಾವಿದರು ತಿಂಗಳಿಗೊಮ್ಮೆ ಐತಿಹಾಸಿಕ ಸ್ಥಳಗಳಿಗೆ ತೆರಳಿ ಸ್ಮಾರಕಗಳ ಚಿತ್ರಗಳನ್ನು ಜಲವರ್ಣದಲ್ಲಿ ಬಿಡಿಸುತ್ತಿದ್ದಾರೆ.
ಚಿತ್ರದುರ್ಗ, ಬೇಲೂರು, ಹಳೇಬೀಡು, ಶ್ರವಣಬೆಳಗೋಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಲಕ್ಕುಂಡಿ, ಹಂಪಿ, ವಿಜಯಪುರ ಸೇರಿದಂತೆ ವಿವಿಧೆಡೆ ಐತಿಹಾಸಿಕ ಸ್ಮಾರಕಗಳಿಗೆ ತೆರಳಿ ಚಿತ್ರಗಳನ್ನು ಅರಳಿಸುತ್ತಿದ್ದಾರೆ. ಈ ಗ್ರೂಪ್‌ನಲ್ಲಿ ಚಿತ್ರಕಲಾ ಶಿಕ್ಷಕರು, ಸಾಫ್ಟವೇರ್ ಎಂಜಿನಿಯರ್‌ಗಳು, ಚಿತ್ರಕಲಾ ವಿದ್ಯಾರ್ಥಿಗಳು, ಸಿನಿಮಾ, ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವವರು ಕೂಡ ಇದ್ದಾರೆ. ತಾವೇ ಆಸಕ್ತಿಯಿಂದ ಆಗಮಿಸಿ ಐತಿಹಾಸಿಕ ತಾಣಗಳಲ್ಲಿ ಚಿತ್ರ ಬಿಡಿಸುತ್ತಿದ್ದಾರೆ. ನಾಡಿನ ಐತಿಹಾಸಿಕ ತಾಣಗಳಿಗೆ ತೆರಳಿ ಐದು ದಿನ, ಆರು ದಿನ ಶಿಬಿರಗಳನ್ನು ನಡೆಸಿ ಚಿತ್ರ ಬಿಡಿಸುತ್ತಿದ್ದಾರೆ.ಯಾವ್ಯಾವ ಸ್ಮಾರಕಗಳು: ಭಾರತೀಯ ಪುರಾತತ್ವ ಇಲಾಖೆಯಿಂದ ಪರವಾನಗಿ ಪಡೆದ ಹಂಪಿಯ ಸ್ಮಾರಕಗಳ ಚಿತ್ರಗಳನ್ನು ಕಲಾವಿದರು ಬಿಡಿಸುತ್ತಿದ್ದಾರೆ. ಶ್ರೀವಿರೂಪಾಕ್ಷೇಶ್ವರ ದೇವಾಲಯ, ಹೇಮಕೂಟ, ಮನ್ಮುಖ ಹೊಂಡ, ರಥಬೀದಿ, ಎದುರು ಬಸವಣ್ಣ ಮಂಟಪ, ಕಡಲೆ ಕಾಳು, ಸಾಸಿವೆಕಾಳು ಗಣಪ ಮಂಟಪ, ಅಚ್ಯುತರಾಯ ದೇವಾಲಯ, ಉಗ್ರ ನರಸಿಂಹ, ವಿಜಯ ವಿಠಲ ದೇವಾಲಯ, ಕಲ್ಲಿನ ತೇರು, ಆನೆಲಾಯ, ಕಮಲ ಮಹಲ್ ಸ್ಮಾರಕ ಸೇರಿದಂತೆ ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಲಾವಿದರು ಜಲವರ್ಣದಲ್ಲಿ ಬಿಡಿಸುತ್ತಿದ್ದಾರೆ.
ಈ ಚಿತ್ರಗಳನ್ನು ಕಲಾ ಪ್ರದರ್ಶನಗಳಲ್ಲಿ ಇಡಲಿದ್ದಾರೆ. ಇದರಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಜೊತೆಗೆ ಜಲವರ್ಣ ಚಿತ್ರಕಲೆಗೆ ಪ್ರೋತ್ಸಾಹಿಸಲು ಈ ಕಲಾವಿದರು ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.ಹಂಪಿಯಲ್ಲಿ ಡಿ.21ರಿಂದ ಬೀಡುಬಿಟ್ಟಿರುವ ಈ ಕಲಾವಿದರು. ಡಿ.25ರವರೆಗೆ ಸ್ಮಾರಕಗಳ ಬಳಿ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಎಂಬ ಭೇದಭಾವ ಇಲ್ಲದೇ ಎಲ್ಲರೂ ಸ್ನೇಹಿತರಾಗಿಯೇ ಪರಸ್ಪರ ಮಾರ್ಗದರ್ಶನದೊಂದಿಗೆ ಚಿತ್ರ ಬಿಡಿಸುತ್ತಿದ್ದಾರೆ. ಈ ಮೂಲಕ ಜಲವರ್ಣ ಚಿತ್ರಕಲೆಗೆ ಉತ್ತೇಜನ ನೀಡುವುದರೊಂದಿಗೆ ಹಂಪಿ ಐತಿಹಾಸಿಕ ಸ್ಮಾರಕಗಳಿಗೂ ಚಿತ್ರಕಲಾ ಮಾಧ್ಯಮದ ಮೂಲಕ ಪ್ರಚುರಪಡಿಸುತ್ತಿದ್ದಾರೆ.
ಹಂಪಿ ಸ್ಮಾರಕಗಳ ಬಳಿ ಖುದ್ದು ಆಗಮಿಸಿ ಚಿತ್ರ ಬಿಡಿಸುವುದು ಅದ್ಭುತ ಅನುಭವ. ಹಂಪಿಯನ್ನು ಚಿತ್ರ ಕಲಾವಿದನಾಗಿ ನೋಡುವ ದೃಷ್ಟಿಕೋನವೇ ಬೇರೆ, ನಾವು ಜಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದೇವೆ ಎನ್ನುತ್ತಾರೆ ಜಲವರ್ಣ ಚಿತ್ರ ಕಲಾವಿದ ಲೋಕೇಶ್ ಆರ್.ಹಂಪಿಯಲ್ಲಿ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಜಲವರ್ಣ ಕಲೆಯನ್ನು ಕಲಿಯಲು ಬಂದಿರುವ ನಮಗೆ ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಅರಳಿಸಲು ಉತ್ತಮ ಅವಕಾಶ ದೊರೆತಿದೆ ಎನ್ನುತ್ತಾರೆ ಚಿತ್ರಕಲಾ ವಿದ್ಯಾರ್ಥಿ ಮನೋಜ್.