ಸಾರಾಂಶ
ಹಾನಗಲ್ಲ: ಕಾಮಗಾರಿಗಾಗಿ ಟೆಂಡರ್ ಆಗಿ ವರ್ಷಗಳೇ ಕಳೆದರೂ ಕಾಮಗಾರಿ ನಡೆದಿಲ್ಲ, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಗೆ ನಿರ್ದಿಷ್ಟ ನಿಯಮ ಪಾಲನೆ ಇಲ್ಲ. ₹2 ಕೋಟಿ ಬಾಡಿಗೆ ಬಾಕಿ, ಪುರಸಭೆ ಅಭಿವೃದ್ಧಿಗೆ ಅನುದಾನವಿಲ್ಲ...
ಹೀಗೆ ಹತ್ತಾರು ವಿಚಾರಗಳಿಂದ ಬುಧವಾರ ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು.ಸಭೆಯಲ್ಲಿ ಹಾನಗಲ್ಲ ಪುರಸಭೆ ಸದಸ್ಯರು ಹತ್ತು ಹಲವು ಸಮಸ್ಯೆಗಳ ಕುರಿತು ಗಮನ ಸೆಳೆದರೂ ಯಾರ ಮಾತೂ ಯಾರಿಗೂ ಕೇಳುತ್ತಿರಲಿಲ್ಲ.
ಪುರಸಭೆ ಸದಸ್ಯ ಜಮೀರಅಹಮ್ಮದ್ ಶೇಖ ಅವರು ಪುರಸಭೆ ಮಳಿಗೆಗಳ ಬಾಡಿಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬಾಡಿಗೆ ವಸೂಲಿ ಮಾಡುತ್ತೇವೆ, ನಿಯಮಗಳನ್ನು ಜಾರಿ ಮಾಡುತ್ತೇವೆ, ಇದರಲ್ಲಿ ಸಂಶಯ ಬೇಡ ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ ಉತ್ತರಿಸಿದರು. ಆದರೆ ₹2 ಕೋಟಿ ಬಾಕಿ ಉಳಿದರೂ ಈ ವರೆಗೆ ವಸೂಲಿ ಆಗದ ಬಗ್ಗೆ ಉತ್ತರಿಸಲೇ ಇಲ್ಲ. ಇದರೊಂದಿಗೆ ಠರಾವು ಒಪ್ಪಿಗೆ ಮಂಡಿಸಿದಾಗ ಸೂಚಕರು ಹಾಗೂ ಅನುಮೋದಕರ ಹೆಸರು ದಾಖಲಿಸುವಲ್ಲಿ ಹಲವು ಗೊಂದಲಗಳಿವೆ. ಇದು ಸೂಚಿಸಿದವರಿಗೂ ಅನುಮೋದಿಸಿದವರಿಗೂ ಗೊತ್ತಿರುವುದೇ ಇಲ್ಲ ಎಂದು ಜಮೀರ ಶೇಖ ಸಭೆಯ ಗಮನ ಸೆಳೆದರು.ಹಾಗನಲ್ಲಿನ ಕಮಾಟಗೇರಿ 12ನೇ ವಾರ್ಡಿನ ರಸ್ತೆ ಕಾಮಗಾರಿಗಾಗಿ ವರ್ಷಕ್ಕೂ ಮೊದಲೇ ಟೆಂಡರ್ ಆಗಿದೆ. ಆದರೆ ಈ ವರೆಗೂ ಕೆಲಸವೇ ಆಗಿಲ್ಲ. ಊರಿನಲ್ಲಿ ಗ್ರಾಮದೇವಿ ಹಬ್ಬ ಬಂದಿದೆ. ಅದರೊಳಗೆ ರಸ್ತೆ ಕೆಲಸ ಆಗದಿದ್ದರೆ ಸಾರ್ವಜನಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುವುದಾಗಿ ಸದಸ್ಯೆ ಶೋಭಾ ಉಗ್ರಣ್ಣನವರ ಹೇಳಿದರು. ಗುತ್ತಿಗೆದಾರರು ಪತ್ತೆ ಇಲ್ಲ. ಕೆಲಸ ಮಾಡುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮುಖ್ಯಾಧಿಕಾರಿ ಜವಾಬ್ದಾರಿ ತೆಗೆದುಕೊಂಡರು.
ಹಾನಗಲ್ಲ ಪಟ್ಟಣದ 10 ಅಂಗನವಾಡಿಗಳ ದುರಸ್ತಿ ಅಗತ್ಯವಿದೆ. ಶಾಲಾ ಕಟ್ಟಡಗಳಲ್ಲಿದ್ದ ಅಂಗವಾಡಿಗಳ ದುರಸ್ತಿ ಆಗಬೇಕಾಗಿದೆ. ಆದರೆ ದುರಸ್ತಿಗೆ ನಮ್ಮಲ್ಲಿ ಹಣವಿಲ್ಲ ಎಂದು ಸಿಡಿಪಿಒ ನಂದಕುಮಾರ ಹೇಳಿದರು. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯಕ್ಕೆ ಬರಲಾಗದೇ ವಿಷಯವನ್ನು ಅಲ್ಲಿಗೆ ಮೊಟಕುಗೊಳಿಸಲಾಯಿತು.ಸಭೆಯಲ್ಲಿ 28 ವಿಷಯಗಳ ಚರ್ಚೆ ಹಾಗೂ ಸಭೆಯ ಅನುಮೋದನೆಯ ಸಂಗತಿಗಳಿದ್ದವು. ಪುರಸಭೆ ಉಳಿತಾಯದ ಮೊತ್ತಕ್ಕೆ ಹಲವು ಕಾಮಗಾರಿಗಳನ್ನು ಆಯ್ಕೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಜಲಮೂಲಗಳ ಪುನಃಶ್ಚೇತನ, ಉದ್ಯಾನಗಳಿಗೆ ಬೇಲಿ ಹಾಗೂ ಉಳಿದ ವ್ಯವಸ್ಥೆ ಕಲ್ಪಿಸುವುದು, ಮಳಿಗೆಗಳಿಗೆ ಹೆಸರಿಡುವ ಕುರಿತು ಚರ್ಚೆಗಳು ನಡೆದವಾದರೂ ಅಂತಿಮ ತೀರ್ಮಾನವಾಗಲೇ ಇಲ್ಲ.
ಪುರಸಭೆ ಮಾಜಿ ಅಧ್ಯಕ್ಷೆ ಹಸೀನಾ ನಾಯ್ಕ ಅವರು ಪುರಸಭೆಯ ಕಾರ್ಯವೈಖರಿಗೆ ಪ್ರತಿಕ್ರಿಯಿಸಿ, ಪುರಸಭೆಯಲ್ಲಿ ಅನುದಾನವಿಲ್ಲ. ನಗರದ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಇಲ್ಲ. ಹಂದಿಗಳ ಕಾಟ ಹೆಚ್ಚಾಗಿದೆ. ನಾವು ಸಭೆ ಮಾಡಿ ಹೋಗುವುದಷ್ಟೇ ಆಗಿದೆ. ಏನೂ ಕೆಲಸಗಳಾಗುತ್ತಿಲ್ಲ. ಸಭೆಯಲ್ಲಿ ಕೂಡ ಮಹಿಳಾ ಸದಸ್ಯರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲೂ ಅವಕಾಶವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೋಪ್ಪ, ಉಪಾಧ್ಯಕ್ಷೆ ವೀಣಾ ಗುಡಿ ಉಪಸ್ಥಿತರಿದ್ದರು. ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಹಸಿನಾಬಿ ನಾಯಕನವರ, ಖುರ್ಷಿದ್ ಹುಲ್ಲತ್ತಿ, ಸರ್ವರಬಾಷಾ ಪೀರಜಾದೆ, ಸದಸ್ಯರಾದ ಜಮೀರಅಹಮ್ಮದ್ ಶೇಖ, ಪರಶುರಾಮ ಖಂಡೂರನವರ, ವಿರೂಪಾಕ್ಷಪ್ಪ ಕಡಬಗೇರಿ, ಸುಂಕವ್ವ ಚಿಕ್ಕಣ್ಣನವರ, ಶೋಭಾ ಉಗ್ರಣ್ಣನವರ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.