ಹಾವೇರಿಗೆ ಕಪ್ಪು ಚುಕ್ಕೆಯಾದ ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣ

| Published : Dec 30 2024, 01:03 AM IST

ಹಾವೇರಿಗೆ ಕಪ್ಪು ಚುಕ್ಕೆಯಾದ ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

2024ನೇ ಇಸ್ವಿ ಹಾವೇರಿ ಜಿಲ್ಲೆ ಪಾಲಿಗೆ ಸಿಹಿ ಕಹಿಗಳೆರಡನ್ನೂ ನೀಡಿದ ವರ್ಷವಾಗಿದೆ. ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದರೆ, ಹಲವು ಅಪಘಾತ ಘಟನೆಗಳು ಇನ್ನೂ ಜನಮಾನಸದಿಂದ ಮಾಸಿಲ್ಲ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

2024ನೇ ಇಸ್ವಿ ಹಾವೇರಿ ಜಿಲ್ಲೆ ಪಾಲಿಗೆ ಸಿಹಿ ಕಹಿಗಳೆರಡನ್ನೂ ನೀಡಿದ ವರ್ಷವಾಗಿದೆ. ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದರೆ, ಹಲವು ಅಪಘಾತ ಘಟನೆಗಳು ಇನ್ನೂ ಜನಮಾನಸದಿಂದ ಮಾಸಿಲ್ಲ.

ವರ್ಷಾರಂಭವೇ ಜಿಲ್ಲೆಗೆ ಶುಭಕರವಾಗಿರಲಿಲ್ಲ. ಕಳೆದ ಜನವರಿ ತಿಂಗಳಲ್ಲಿ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಮಹಿಳೆಯ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ್ದಷ್ಟೇ ಅಲ್ಲದೇ ರಾಜ್ಯಮಟ್ಟದಲ್ಲೂ ಸದ್ದು ಮಾಡಿತು. ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ವಸತಿಗೃಹವೊಂದಕ್ಕೆ ಬಂದಿದ್ದ ಅನ್ಯಕೋಮಿನ ಮಹಿಳೆಯ ಮೇಲೆ ಪುಂಡರ ಗುಂಪೊಂದು ನೈತಿಕ ಪೊಲೀಸ್‌ಗಿರಿ ಮೆರೆದದ್ದಷ್ಟೇ ಅಲ್ಲ, ಮಹಿಳೆಯನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಆರಂಭದಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನವೂ ನಡೆಯಿತು. ಬಳಿಕ ಸಂತ್ರಸ್ತ ಮಹಿಳೆಯೇ ವಿಡಿಯೋ ಬಿಡುಗಡೆ ಮಾಡಿದ ಮೇಲೆ ಪ್ರಕರಣದ ಕರಾಳ ಸ್ವರೂಪ ಬಯಲಿಗೆ ಬಂತು. ಇದಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದರು. ಹೀಗಾಗಿ ಈ ಪ್ರಕರಣ ರಾಜಕೀಯ ಸ್ವರೂಪವನ್ನೂ ತಾಳಿತು. ಬಿಜೆಪಿ ಮುಖಂಡರು ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದರು. ದಿನದಿಂದ ದಿನಕ್ಕೆ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿ 19 ಜನರನ್ನು ಬಂಧಿಸಿದರು. ಪ್ರಕರಣದ ತನಿಖೆಯನ್ನು 58 ದಿನಗಳಲ್ಲಿ ಪೂರ್ಣಗೊಳಿಸಿದ ಪೊಲೀಸರು, 19 ಆರೋಪಿತರ ಮೇಲೆ ಬರೋಬ್ಬರಿ 873 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 10 ಜನ ಆರೋಪಿಗಳಿಗೆ ಜಾಮೀನು ನೀಡಿದೆ. ಈ ಘಟನೆ ಜಿಲ್ಲೆಯ ಪಾಲಿಗೆ ಕರಾಳ ಅಧ್ಯಾಯವಾಗಿ ಉಳಿಯುವಂತಾಯಿತು.

ದುರಂತಗಳ ಸರಮಾಲೆ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಸಕ್ತ ವರ್ಷ ಸಾವಿನ ರಹದಾರಿಯಾಗಿ ಪರಿಣಮಿಸಿತು. ಆಗಾಗ ಸಣ್ಣಪುಟ್ಟ ಅಪಘಾತಗಳಲ್ಲಿ ಒಬ್ಬರು, ಇಬ್ಬರು ಪ್ರಾಣ ಕಳೆದುಕೊಂಡಿರುವುದು ಸಾಮಾನ್ಯವಾಗಿದ್ದರೆ, ಈ ಹೆದ್ದಾರಿಯಲ್ಲಿ ನಡೆದ ಪ್ರಮುಖ ಮೂರು ಅಪಘಾತದಲ್ಲಿಯೇ 22 ಜನರು ಮೃತಪಟ್ಟಿದ್ದಾರೆ.ಜೂ.27ರಂದು ಮಧ್ಯರಾತ್ರಿ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನವೊಂದು ಗುದ್ದಿದ ಪರಿಣಾಮ ದೇವರ ದರ್ಶನ ಮುಗಿಸಿ ಊರಿಗೆ ವಾಪಸಾಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ, ಹನುಮಂತಾಪುರ ಗ್ರಾಮದ ಒಂದೇ ಕುಟುಂಬದ 13 ಜನರು ಮೃತಪಟ್ಟಿದ್ದರು. ಇನ್ನೊಂದು ಪ್ರಕರಣದಲ್ಲಿ ಹಾವೇರಿಯಿಂದ ತಿರುಪತಿಗೆ ಹೊರಟಿದ್ದ ಕಾರು ರಾಣಿಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದಷ್ಟೇ ಶಿಗ್ಗಾಂವಿ ತಾಲೂಕಿನ ತಡಸ-ತಿಮ್ಮಾಪುರ ಬಳಿ ಎರಡು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬ್ಯಾಡಗಿ ಎಪಿಎಂಸಿ ಕರಾಳ ದಿನ: ಜಿಲ್ಲೆಯ ಬ್ಯಾಡಗಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾ.11ರಂದು ಮೆಣಸಿನಕಾಯಿ ದರ ಕುಸಿತಗೊಂಡಿದೆ ಎಂದು ಆರೋಪಿಸಿ ಆಂಧ್ರ, ತೆಲಂಗಾಣ ಮುಂತಾದ ಕಡೆಗಳಿಂದ ಬಂದಿದ್ದ ರೈತರು ಎಪಿಎಂಸಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ವಿಶ್ವವಿಖ್ಯಾತ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಹೆಸರಿಗೆ ಮಸಿಬಳಿಯುವಂತಾಯಿತು. ಕಿಡಿಗೇಡಿಗಳು ಪೀಠೋಪಕರಣ ಧ್ವಂಸಗೊಳಿಸಿ ಕಾರು, ಅಗ್ನಿಶಾಮಕ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಬೆಚ್ಚಿಬಿಳುವಂತೆ ಮಾಡಿತ್ತು.ದರ ಕುಸಿತದಿಂದ ಆಕ್ರೋಶಗೊಂಡ ರೈತರ ಪ್ರತಿಭಟನೆ ಏಕಾಏಕಿ ಹಿಂಸಾತ್ಮಕ ರೂಪ ಪಡೆಯಿತು. ಎಪಿಎಂಸಿ ಕಚೇರಿಯತ್ತ ಕಲ್ಲು ತೂರಿ ಕಿಟಕಿ ಗಾಜುಗಳು ಪುಡಿಪುಡಿ ಮಾಡಿ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಆಕ್ರೋಶಗೊಂಡಿದ್ದ ರೈತರು ಕಚೇರಿಯ ಮುಂಭಾಗ ನಿಂತಿದ್ದ ಎಪಿಎಂಸಿಯ ನಾಲ್ಕು ವಾಹನ, ಖಾಸಗಿ ಎರಡು ಕಾರಿಗೆ ಬೆಂಕಿ ಹಚ್ಚಿದ್ದರು. ಬೆಂಕಿ ನಂದಿಸಲು ಎಪಿಎಂಸಿ ಬಂದಿದ್ದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯನ್ನು ವಾಹನದಿಂದ ಇಳಿಸಿ ಅಟ್ಟಾಡಿಸಿ ಥಳಿಸಿದರಲ್ಲದೇ ಅಗ್ನಿಶಾಮಕ ವಾಹನವನ್ನೇ ಸುಟ್ಟು ಭಸ್ಮಗೊಳಿಸಿದರು.

ಪರಿಸ್ಥಿತಿ ಕೈಮೀರುತ್ತಿದಂತೆ ಬೆರಳೆಣಿಕೆಯಷ್ಟು ಪೊಲೀಸರು ರೈತರನ್ನು ಚದುರಿಸಲು ಮುಂದಾದಾಗ ತಿರುಗಿಬಿದ್ದ ರೈತರು ಪೊಲೀಸರನ್ನೇ ಬೆನ್ನತ್ತಿ ಥಳಿಸಿದರು. ಈ ಘಟನೆಯಲ್ಲಿ ಪೊಲೀಸರ ಸಮಯಪ್ರಜ್ಞೆ ಶ್ಲಾಘನೆಗೆ ಕಾರಣವಾಯಿತು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅಮಾಯಕರು ಬೆಲೆ ತೆರಬೇಕಾಗಿತ್ತು. ಜತೆಗೆ ಸರ್ಕಾರಕ್ಕೂ ಕೆಟ್ಟ ಹೆಸರು ಬರುವ ಸಾಧ್ಯತೆಯಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 80ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದಲ್ಲದೇ ಈ ವರ್ಷ ವಕ್ಫ್‌ ವಿವಾದವೂ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿತು. ಸವಣೂರು ತಾಲೂಕು ಕಡಕೋಳ ಗ್ರಾಮದಲ್ಲಿ ತಮ್ಮ ಮನೆ ಹಾಗೂ ಜಮೀನಿಗಳನ್ನು ವಕ್ಫ್‌ ಬೋರ್ಡ್‌ ಪಡೆಯಬಹುದು ಎಂಬ ವದಂತಿಯನ್ನೇ ನಂಬಿ ಅನ್ಯ ಕೋಮಿನ ಮನೆಗಳ ಮೇಲೆ ದಾಳಿ ನಡೆಸಿ ದೊಡ್ಡ ಗಲಾಟೆಯೇ ನಡೆಯಿತು. ಇನ್ನು ವಕ್ಫ್ ಬೋರ್ಡ್‌ನಿಂದ ಆಸ್ತಿ ಪಡೆದ ಹಿನ್ನೆಲೆಯಲ್ಲಿ ಹರನಗಿರಿಯ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಕೂಡ ದೊಡ್ಡ ಸುದ್ದಿಯಾಯಿತು. ಆದರೆ, ಈ ಪ್ರಕರಣದಲ್ಲಿ ರೈತ ಹಲವು ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾದ ಮೇಲೆ ವಿಷಯ ತಣ್ಣಗಾಯಿತು. ಹೀಗೆ ವರ್ಷದುದ್ದಕ್ಕೂ ಹಲವು ಕಹಿ ಘಟನೆಗಳು ಜಿಲ್ಲೆಯನ್ನು ಘಾಸಿಗೊಳಿಸಿದೆ. ಕಹಿ ಘಟನೆಗಳನ್ನು ಮರೆತು ಹೊಸ ವರ್ಷದ ಸ್ವಾಗತಕ್ಕೆ ಜಿಲ್ಲೆಯ ಜನರು ಅಣಿಯಾಗಿದ್ದಾರೆ.