ಸಾರಾಂಶ
ಹಾನಗಲ್ಲ: ಹಾನಗಲ್ಲ ಗ್ರಾಮದೇವಿ ಜಾತ್ರೆ ಮಾ. 18ರಿಂದ 26ರ ವರೆಗೆ ಜರುಗಲಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಸಿದ್ಧತೆ ನಡೆದಿದೆ. ಪೊಲೀಸ್, ಪುರಸಭೆ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಸುವ್ಯವಸ್ಥಿತ ಜಾತ್ರೆ ಜರುಗಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಸಂಚಾಲಕ ರಾಜು ಗೌಳಿ ಹೇಳಿದರು.ಶನಿವಾರ ಪುರಸಭೆ ಆವರಣದಲ್ಲಿರುವ ಜಾತ್ರಾ ಸಮಿತಿ ಕಾರ್ಯಾಲಯದಲ್ಲಿ ಜಾತ್ರೆಯ ಸಿದ್ಧತೆಗಳ ವಿವರ ನೀಡಿದ ಅವರು, ಜಾತ್ರೆಯ ಅಂಗವಾಗಿ ಹತ್ತು ದಿನಗಳ ಕಾಲ ಶಿವಮೊಗ್ಗ, ಶಿರಸಿ ಮತ್ತು ಹಾವೇರಿ ಮಾರ್ಗದಿಂದ ಬರುವ ವಾಹನಗಳನ್ನು ಅಕ್ಕಿಆಲೂರು, ಸುರಳೇಶ್ವರ, ಕುಂಟನಹೊಸಳ್ಳಿ ಮಾರ್ಗದಿಂದ ಹಾನಗಲ್ಲ ಬಸ್ ನಿಲ್ದಾಣ ತಲುಪಲಿವೆ. ಹುಬ್ಬಳ್ಳಿಯಿಂದ ಆಗಮಿಸುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಲಿವೆ. ಕುಮಾರೇಶ್ವರ ಮಠದಿಂದ ಚಿಕ್ಕೇರಿ ಹೊಸಳ್ಳಿ, ಆರೇಗೊಪ್ಪ, ಕೊಪ್ಪರಸಿಕೊಪ್ಪ ರಸ್ತೆ ಮೂಲಕ ಮುಂಡಗೋಡ, ಹುಬ್ಬಳ್ಳಿಗೆ ತೆರಳಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರ ವಾಹನಗಳ ನಿಲುಗಡೆಗೆ ತಾಲೂಕು ಕ್ರೀಡಾಂಗಣ, ಕುಮಾರೇಶ್ವರಮಠದ ಆವರಣ, ಕುಮಾರೇಶ್ವರ ಮಹಾವಿದ್ಯಾಲಯದ ಆವರಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬರುವ ಶುಕ್ರವಾರದಿಂದ ಮೂರು ವಾರದ ಸಂತೆಗಳನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಜಾತ್ರೆಯ ಅಂಗವಾಗಿ ಮುನ್ನೂರಕ್ಕೂ ಅಧಿಕ ಮಳಿಗೆಗಳಿಗೆ ಜಾಗ ನೀಡಲಾಗಿದೆ. ಅವೆಲ್ಲವುಗಳಿಗೂ ಮೂಲಸೌಕರ್ಯ ಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ, ಬೀದಿದೀಪ, ಕುಡಿಯುವ ನೀರಿನ, ಶೌಚಗೃಹ ಮುಂತಾದ ವ್ಯವಸ್ಥೆಗಾಗಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಕ್ರಮ ಕೈಗೊಳ್ಳುತ್ತಿದ್ದಾರೆ. ಭದ್ರತಾ ವ್ಯವಸ್ಥೆಗಾಗಿ ಯುವಕರ ಸಮಿತಿ ರಚಿಸಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಪೊಲೀಸ್ ಚೌಕಿ, ಹೆಲ್ತ್ ಯುನಿಟ್, ಅಂಬುಲೆನ್ಸ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಾತ್ರಾ ಟ್ರಸ್ಟ್ ಅಧ್ಯಕ್ಷ ಮಂಜಣ್ಣ ನಾಗಜ್ಜನವರ ಮಾತನಾಡಿ, ಮಾ. 14ರಂದು ಬೆಳಗ್ಗೆ ಅಂಕಿ ಹಾಕುವ ಕಾರ್ಯಕ್ರಮಕ್ಕೆ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಚಾಲನೆ ನೀಡಲಿದ್ದಾರೆ. ಮಾ. 18ರಂದು ರಾತ್ರಿ 8 ಗಂಟೆಗೆ ಗ್ರಾಮದೇವಿಯ ರಥೋತ್ಸವ ಆರಂಭಗೊಳ್ಳಲಿದ್ದು, ಮಾ. 19ರಂದು ಬೆಳಗ್ಗೆ ಪಾದಗಟ್ಟಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ದೇವಿ ಪ್ರತಿಷ್ಠಾಪನೆ ನಡೆಯಲಿದೆ. ಪಟ್ಟಣದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಜಾತ್ರೆ ನಡೆಯಲಿದ್ದು, ಇದು ಹತ್ತನೇ ಜಾತ್ರೆಯಾಗಿದೆ. ವಾಹನಗಳ ಪರ್ಯಾಯ ಮಾರ್ಗದ ಕುರಿತು ಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳೂ ಜರುಗದಂತೆ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ವಿವರಿಸಿದರು.ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಗಾಗಿ ಸಾಕಷ್ಟು ಪೌರಕಾರ್ಮಿಕರ ನಿಯೋಜನೆ ಮಾಡಲಾಗಿದೆ. ಪಟ್ಟಣದಾದ್ಯಂತ ಎಲ್ಲ ಕಡೆಗಳಲ್ಲಿ ಎಲ್‌ಇಡಿ ಬೀದಿದೀಪಗಳ ವ್ಯವಸ್ಥೆ ಮಾಡಲಾಗಿದೆ. ಭಾವಸಾರ ಕ್ಷತ್ರಿಯ ವಿಠೋಬ ದೇವಸ್ಥಾನದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೈಗೊಂಡಿದ್ದಾರೆ. ಇದರೊಂದಿಗೆ ಗರಡಿಮನೆ ಕ್ರಾಸ್‌ನಲ್ಲಿ ಸದ್ಭಕ್ತರಿಗಾಗಿ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಈ ಎರಡೂ ಕಡೆಗಳಲ್ಲಿ ಉಚಿತವಾಗಿ ಕುಡಿಯುವ ನೀರು ವಿತರಿಸಲಾಗುತ್ತದೆ. ಪಟ್ಟಣದಲ್ಲಿ ಜಾತ್ರೆಯ ನಿಮಿತ್ತ 5 ದಿನಗಳ ಬದಲಾಗಿ 3 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಜಾತ್ರಾ ಟ್ರಸ್ಟ್‌ನ ಪದಾಧಿಕಾರಿಗಳಾದ ಗಣೇಶ ಮೂಡ್ಲಿಯವರ, ಆದರ್ಶ ಶೆಟ್ಟಿ, ಗುರುರಾಜ ನಿಂಗೋಜಿ, ಭೋಜರಾಜ ಕರೂದಿ, ಪಿ.ಕೆ. ಪಾರಗಾಂವಕರ, ಬಾಳಾರಾಮ ಗುರ್ಲಹೊಸೂರ, ಕೃಷ್ಣ ಬಾಗಲೆ, ವಿರೂಪಾಕ್ಷಪ್ಪ ಕಡಬಗೇರಿ, ಸುರೇಶ ಪೂಜಾರ, ಯಲ್ಲಪ್ಪ ಶೇರಖಾನಿ, ಕೀರ್ತಿ ಚಿನ್ನಮುಳಗುಂದ, ಈಶ್ವರ ವಾಲ್ಮೀಕಿ, ದಯಾನಂದ ನಾಗಜ್ಜನವರ, ಹನುಮಂತಪ್ಪ ಬಾಳೂರ, ಸಂಜು ಬೇದ್ರೆ, ಹೆಸ್ಕಾಂ ಅಧಿಕಾರಿ ಕೃಷ್ಣ ಕಲ್ಲೇರ ಇತರರಿದ್ದರು.