ಹಾನಗಲ್ಲ ಕುಮಾರ ಶ್ರೀಗಳು ಸಾಧಕರ ಸಂಜೀವಿನಿ: ಸಿದ್ಧಲಿಂಗ ದೇವರು

| Published : Mar 06 2024, 02:25 AM IST

ಸಾರಾಂಶ

ಸಮಾಜದ ಶ್ರೇಯೋಭಿವೃದ್ಧಿಗೆ ಮೂಲ ಬುನಾದಿ ಹಾಕಿಕೊಡುವುದರ ಮೂಲಕ ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ನಾಡಿನ ವಟು ಸಾಧಕರಿಗೆ ಸಂಜೀವಿನಿಯಾಗಿದ್ದಾರೆ.

ಅಕ್ಕಿಆಲೂರು ಉತ್ಸವ-೨೦೨೪ ಸಮಾರಂಭದ ಧರ್ಮ ಚಿಂತನಗೋಷ್ಠಿ

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

೧೨ನೇ ಶತಮಾನದಲ್ಲಿ ನಡೆದ ಬಸವಾದಿ ಪ್ರಮಥರ ವಚನ ಕ್ರಾಂತಿಯ ನಂತರ ಸಮಾಜದ ಶ್ರೇಯೋಭಿವೃದ್ಧಿಗೆ ಮೂಲ ಬುನಾದಿ ಹಾಕಿಕೊಡುವುದರ ಮೂಲಕ ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ನಾಡಿನ ವಟು ಸಾಧಕರಿಗೆ ಸಂಜೀವಿನಿಯಾಗಿದ್ದಾರೆ ಎಂದು ತಾಳಿಕೋಟೆಯ ಖಾಸ್ಗತ್ತೇಶ್ವರ ಮಠದ ಉತ್ತರಾಧಿಕಾರಿ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದಲ್ಲಿ ನಡೆದಿರುವ ಅಕ್ಕಿಆಲೂರು ಉತ್ಸವ-೨೦೨೪ ಸಮಾರಂಭದ ಧರ್ಮ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾನಗಲ್ಲ ಕುಮಾರೇಶ್ವರರ ಜೀವನಾದರ್ಶಗಳು, ಅನುಸರಿಸಿದ ತತ್ವಗಳು ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಶಕ್ತಿ ಹೊಂದಿವೆ. ಲಿಂಗಪೂಜೆಯಲ್ಲಿ ತಮ್ಮನ್ನು ತಾವೇ ಮರೆಯುತ್ತಿದ್ದ ಕುಮಾರ ಶ್ರೀಗಳು ಸಾಧಕರ ಪಾಲಿನ ದೈವತ್ವವಾಗಿದ್ದಾರೆ. ಧರ್ಮಾಚರಣೆಗಳು, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಇಲ್ಲದಿದ್ದರೆ ಜಗತ್ತಿನ ಸಂಸಾರ ಕಹಿಯಾಗಿರುತ್ತಿತ್ತು. ನಾಡಿನ ಮಠಮಾನ್ಯಗಳು ಜಗತ್ತನ್ನು ಬೆಳಗುವ ಉದ್ದೇಶದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆಯಾದರೂ ಜನ ಸಂಪರ್ಕದ ಕೊರತೆಯಿಂದ ಮಂಕಾಗುತ್ತಿವೆ. ಆಧುನಿಕ ದಿನಗಳಲ್ಲಿ ಕೇವಲ ಮಾಧ್ಯಮಗಳ ದಾಸರಾಗಿ ತಮ್ಮ ಸರ್ವಸ್ವವನ್ನು ಬದಿಗಿಡುತ್ತಿರುವ ಯುವಶಕ್ತಿ ಜಾಗೃತಗೊಂಡು ತಮ್ಮೊಳಗಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳಬೇಕಿದೆ ಎಂದರು.

ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿ, ಲಿಂ. ಚನ್ನವೀರ ಶ್ರೀಗಳು ತಮ್ಮ ಮೌನ ಧ್ಯಾನ, ತಪಸ್‌ಶಕ್ತಿಯ ಮೂಲಕ ಈ ಭಾಗದ ಭಕ್ತರೋದ್ಧಾರಕ್ಕಾಗಿ ಶ್ರಮಿಸಿದ್ದಾರೆ. ತಮ್ಮ ಮೌನದಲ್ಲೇ ದೇವರೊಟ್ಟಿಗೆ ಮಾತನಾಡಿದ ಮಹಾತ್ಮರು ಲಿಂ. ಚನ್ನವೀರ ಶ್ರೀಗಳಾಗಿದ್ದರು. ಅವರ ತತ್ವಾದರ್ಶಗಳನ್ನು ನಮ್ಮ ಜೀವನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಪ್ರತಿನಿತ್ಯ ಜಂಜಾಟಗಳ ನಡುವೆ ಬದುಕು ಸಾಗಿಸುತ್ತ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಿರುವ ಸಮುದಾಯ ಸುಭಾಷಿತಗಳು, ವಚನಗಳು, ಕೀರ್ತನೆಗಳು ಮನಸ್ಸಿಗೆ ಆನಂದ ನೀಡುತ್ತವೆ ಎಂಬ ಸತ್ಯವನ್ನು ಅರಿಯಬೇಕಿದೆ ಎಂದರು.

ನಂತರ ತಾಳಿಕೋಟೆಯ ಸಿದ್ಧಲಿಂಗ ದೇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನವಲಗುಂದ ಬಸವಲಿಂಗ ಶ್ರೀಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು, ಬಾಳೂರಿನ ಕುಮಾರ ಶ್ರೀಗಳು, ಹೊಳಲದ ಚನ್ನಬಸವ ದೇವರು, ಅಮೇರಿಕಾದ ಶ್ರೀಶೈಲ್ ವಿರುಪಣ್ಣನವರ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸದಾಶಿವ ಕಂಬಾಳಿ, ಸದಾಶಿವ ಬೆಲ್ಲದ, ಕುಮಾರ್ ಶಿರಳಿಯವರ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.