ಸಾರಾಂಶ
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಪರಮ ಪೂಜ್ಯ ಲಿಂ. ಶ್ರೀಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮ ಶನಿವಾರ ಜರುಗಿತು.
ಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಂಪ್ಲಿಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಪರಮ ಪೂಜ್ಯ ಲಿಂ. ಶ್ರೀಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮ ಶನಿವಾರ ಜರುಗಿತು.
ವೀರಶೈವ ಸಮಾಜದ ಮುಖಂಡ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಶಿವ ತಪ ಶಿವ ಕರ್ಮ ಶಿವಜಪ ಶಿವ ಧ್ಯಾನ ಶಿವಜ್ಞಾನ ಎಂಬ ಪಂಚಸೂತ್ರಗಳೊಂದಿಗೆ ಶಿವ ಸಾಯುಜ್ಯವನ್ನು ಪಡೆಯುವುದೇ ಶಿವಯೋಗ ಸಿದ್ಧಾಂತದ ಮೂಲ ತತ್ವ. ಇಂತಹ ಸಿದ್ಧಾಂತಕ್ಕೆ ಪರಿಪೂರ್ಣತೆಯನ್ನು ತಮ್ಮ ಜೀವಿತದ ಮೂಲಕ ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.ಆಧ್ಯಾತ್ಮಿಕತೆಯ ಆವರಣವನ್ನು ಕೇವಲ ಶಾಸ್ತ್ರಾಭ್ಯಾಸದಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ, ಬದಲಾಗಿ ಶಾಸ್ತ್ರಗಳ ಮೂಲಕ ಸಶಕ್ತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಸರ್ವವನ್ನೂ ಸಾಕಾರಗೊಳಿಸುವುದು ಎಂದರೆ ಸಂತರು ಯೋಗಿಗಳು. ಅಂತಹದೇ ಒಬ್ಬ ಶ್ರೇಷ್ಠ ಶಿವಭಕ್ತನಾಗಿದ್ದುಕೊಂಡು ಸ್ವಚ್ಛ ಸೇವಾಮನೋಭಾವದ ಸಮಾಜವನ್ನು ನಿರ್ಮಿಸಿದವರು ಶ್ರೀ ಕುಮಾರ ಶಿವಯೋಗಿಗಳು ಎಂದರು.
ಕಲ್ಯಾಣ ಚೌಕಿ ಮಠದ ಬಸವರಾಜ ಶಾಸ್ತ್ರಿಗಳು ಮಾತನಾಡಿ, ಕುಮಾರ ಶಿವಯೋಗಿಗಳು ಸರಳ ಮತ್ತು ವಿನಯ ಸಂಪನ್ನರಾಗಿ ದಾರ್ಶನಿಕ ಭಾವದೊಂದಿಗೆ ಜೀವಿತ್ವದ ಮತ್ತು ದೈವತ್ವದ ಸಾರ್ಥಕತೆಯನ್ನು ಕಾರ್ಯಗಳ ಮೂಲಕ ತಿಳಿಯಪಡಿಸಿದರು ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಲಿಗಾರ ವೆಂಕಟರೆಡ್ಡಿ ಮಾತನಾಡಿ, ಹರಿದು ಹಂಚಿಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ ಎಂದರು.
ಈ ಸಂದರ್ಭ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಕಲ್ಯಾಣ ಚೌಕಿ ಮಠದ ಬಸವರಾಜಶಾಸ್ತ್ರಿ, ಮಹಾಸಭಾದ ತಾಲೂಕು ಕಾರ್ಯದರ್ಶಿ ಜೀರ್ ಗಾಧಿಲಿಂಗಪ್ಪ, ಯುವ ಘಟಕದ ಕಾರ್ಯದರ್ಶಿ ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ, ಅಕ್ಕನ ಬಳಗದ ಅಧ್ಯಕ್ಷೆ ಶಾರದಾ ಹಿರೇಮಠ, ಪ್ರಮುಖರಾದ ಮುಕ್ಕುಂದಿ ಶಿವಗಂಗಮ್ಮ, ಮುಖಂಡರಾದ ಎಸ್.ಎಂ. ನಾಗರಾಜ್, ಜಗನ್ನಾಥ ಹಿರೇಮಠ್, ಡಿ.ಮಂಜುನಾಥ್ ಗೌಡ, ಎಸ್.ಡಿ. ಬಸವರಾಜ್, ಜವುಕಿನ ಸತೀಶ್, ವಿದ್ಯಾಶಂಕರ್, ಅಂಬರೀಷ್ ಗೌಡ, ಬಂಡಯ್ಯ ಸ್ವಾಮಿ, ಮಣ್ಣೂರು ಶರಣಪ್ಪ, ಶೇಖರಪ್ಪ, ಚಂದ್ರಶೇಖರ ಗೌಡ, ಪುಟ್ಟಿ ಸಚಿನ್, ಶಂಕರ್, ಅಲಬಾನೂರ್ ಬಸವರಾಜ್ ಸೇರಿ ಇತರರಿದ್ದರು. ಸುರಭಿ ರೆಡ್ಡಿ ಪ್ರಾರ್ಥನೆ ಹಾಡಿದರು. ಘನಮಠದಯ್ಯ ಹಿರೇಮಠ ನಿರೂಪಿಸಿದರು. ಚಂದ್ರಶೇಖರಗೌಡ ವಂದಿಸಿದರು.