ನಾಡಹಬ್ಬದಿಂದ ಹಾನಗಲ್‌ನ ಹಿರಿಮೆ ಹೆಚ್ಚಿದೆ-ಶಾಸಕ ಮಾನೆ

| Published : Oct 06 2024, 01:21 AM IST

ಸಾರಾಂಶ

ಹಾನಗಲ್ಲ ಸುಸಂಸ್ಕೃತ ನೆಲೆಬೀಡು. ಇಲ್ಲಿ ಕಳೆದ 87 ವರ್ಷಗಳಿಂದ ಆಚರಿಸುತ್ತಿರುವ ನಾಡಹಬ್ಬದಿಂದ ಹಾನಗಲ್‌ನ ಹಿರಿಮೆ ಹೆಚ್ಚಿದೆ. ಇಂಥ ನೆಲದಲ್ಲಿ ಸಂಪ್ರದಾಯ ಅಳಿಸಿ ಹೋಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಹಾನಗಲ್ಲ ಸುಸಂಸ್ಕೃತ ನೆಲೆಬೀಡು. ಇಲ್ಲಿ ಕಳೆದ 87 ವರ್ಷಗಳಿಂದ ಆಚರಿಸುತ್ತಿರುವ ನಾಡಹಬ್ಬದಿಂದ ಹಾನಗಲ್‌ನ ಹಿರಿಮೆ ಹೆಚ್ಚಿದೆ. ಇಂಥ ನೆಲದಲ್ಲಿ ಸಂಪ್ರದಾಯ ಅಳಿಸಿ ಹೋಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಇಲ್ಲಿನ ಫ್ರೆಂಡ್ಸ್ ಅಸೋಸಿಯೇಶನ್ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬದಲ್ಲಿ ಪಾಲ್ಗೊಂಡು, ತಾಯಿ ಭುವನೇಶ್ವರಿಯ ಮೂರ್ತಿಗೆ ಪೂಜೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು. ಇಂದಿನ ಹಾನಗಲ್ ಅಂದು ಕದಂಬರು ಆಳಿದ ಪಾನುಂಗಲ್ ಎಲ್ಲ ದೃಷ್ಟಿಗಳಿಂದಲೂ ಸುಭಿಕ್ಷೆಯಿಂದ ಕೂಡಿದ ಪ್ರಾಂತ. ಜನಜಾಗೃತಿಗಾಗಿ ಆರಂಭಗೊಂಡ ನಾಡಹಬ್ಬ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸೃಜನಶೀಲ ಮನೋಭಾವನೆಯ ಸಾಹಿತ್ಯಾಸಕ್ತರು ನಾಂದಿ ಹಾಡಿದ ನಾಡಹಬ್ಬ ಇತ್ತೀಚಿನ ಕೆಲ ವರ್ಷಗಳಲ್ಲಿ ಕೊರೋನಾ ಸೇರಿದಂತೆ ಇನ್ನಿತರ ಕಾರಣಗಳಿಂದ ಕಳೆಗುಂದಿದೆ. ಅಂದು ಸದುದ್ದೇಶ, ಜಾಗೃತಿ ಹಾಗೂ ಸಾಂಸ್ಕೃತಿಕ ಪರಿಸರದ ನಿರ್ಮಾಣಕ್ಕೆ ಆರಂಭಗೊಂಡ ನಾಡಹಬ್ಬಕ್ಕೆ ಮತ್ತೆ ಜೀವ ಕಳೆ ತುಂಬುವ ಅಗತ್ಯವಿದೆ ಎಂದು ಹೇಳಿದ ಅವರು ನಾಡದೇವಿ ಸಂಕಷ್ಟಗಳನ್ನೆಲ್ಲ ಪರಿಹರಿಸಿ, ಎಲ್ಲರಿಗೂ ಮಂಗಲ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಸಾಹಿತಿ ಉದಯ ನಾಸಿಕ ಮಾತನಾಡಿ, ಹಾನಗಲ್ ಜನತೆಗೆ ನಾಡಹಬ್ಬವನ್ನು ಮನೆ, ಮನೆಗಳ ಹಬ್ಬವಾಗಿ ಆಚರಿಸುವ ಪರಿಪಾಠ ಹೊಂದಿದ್ದಾರೆ. ನಾಡಹಬ್ಬದ ಮೂಲಕ ನಾಡು, ನುಡಿ ಸೇವೆಯನ್ನು ಶ್ರದ್ಧೆ-ಭಕ್ತಿಯಿಂದ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದ ದಿಗ್ಗಜರು, ಚಿತ್ರನಟರು, ಹಿರಿಯ ಕಲಾವಿದರು ಸಾಕ್ಷಿಯಾಗಿರುವ ನಾಡಹಬ್ಬ ಕಲೆ, ಕಲಾವಿದರಿಂದ ಸೂಕ್ತ ವೇದಿಕೆ ಕಲ್ಪಿಸಿದೆ. ಇಂಥ ಹಿನ್ನೆಲೆಯ ಹಾನಗಲ್ ನಾಡಹಬ್ಬದ ಗತವೈಭವ ಮತ್ತೆ ಮರುಕಳಿಸಬೇಕಿದೆ ಎಂದರು. ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಸದಸ್ಯರಾದ ವಿರೂಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಲ್. ದೇಶಪಾಂಡೆ, ನಿವೃತ್ತ ಉಪನ್ಯಾಸಕ ಆರ್.ಸಿ. ದೇಸಾಯಿ, ಗಿರೀಶ್ ದೇಶಪಾಂಡೆ, ಸುಧಾಬಾಯಿ ದೇಶಪಾಂಡೆ, ಡಿ.ಜಿ. ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.