ಸಾರಾಂಶ
ಕಾರವಾರ: ಮುಂಡಗೋಡ ತಾಲೂಕು 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವಾಗಲೇ ಗ್ರಾಪಂ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಯ ಶೇ. 100ರಷ್ಟು ವಸೂಲಾತಿ ಮಾಡಿದೆ. ಈ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕರ ಸಂಗ್ರಹಣೆಯಲ್ಲಿ ವಿನೂತನ ದಾಖಲೆ ಬರೆದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ ₹1.52 ಕೋಟಿ ತೆರಿಗೆ ಸಂಗ್ರಹ ಗುರಿಗೆ ಪ್ರತಿಯಾಗಿ ₹ 1.53 ಕೋಟಿ ಕರ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬೇಡಿಕೆಯ ಅರ್ಧದಷ್ಟು ಗುರಿ ಸಾಧಿಸಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಮುಂಡಗೋಡು ತಾಲೂಕು ಇಷ್ಟು ಬೇಗ ಗುರಿ ಸಾಧಿಸಲು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಅವರ ಸೂಕ್ತ ಮಾರ್ಗದರ್ಶನ, ಅಧಿಕಾರಿಗಳು, ಸಿಬ್ಬಂದಿ ಮತ್ತು ಜನರ ಸಹಕಾರ, ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ಎಂಬ ವಿನೂತನ ಪ್ರಯತ್ನ ಹಾಗೂ ವಿಶೇಷ ತೆರಿಗೆ ಅಭಿಯಾನಗಳು ಕಾರಣವಾಗಿವೆ.ಮುಂಡಗೋಡ ತಾಲೂಕಿನಲ್ಲಿ ಜುಲೈ ತಿಂಗಳಿನಿಂದಲೇ ತೆರಿಗೆ ವಸೂಲಾತಿ ಪ್ರಾರಂಭಿಸಲಾಗಿತ್ತು. ಪ್ರತಿ ವಾರ ಹೆಚ್ಚಿನ ತೆರಿಗೆ ವಸೂಲಾತಿ ಮಾಡುವ ಕರ ವಸೂಲಿಗಾರರಿಗೆ ಸ್ಟಾರ್ ಪರ್ಫಾರ್ಮರ್ ಆಫ್ ದಿ ವೀಕ್ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪಿಡಿಒ, ಬಿಲ್ ಕಲೆಕ್ಟರ್ ಹಾಗೂ ಇತರ ಸಿಬ್ಬಂದಿಗೆ ಪ್ರತಿ ವಾರ ಸಭೆ ನಡೆಸಿ ತೆರಿಗೆ ವಸೂಲಾತಿ ಪ್ರಗತಿ ಪರಿಶೀಲಿಸಲಾಗುತ್ತಿದೆ. ಪ್ರತಿ ಗುರುವಾರ ತಾಲೂಕಿನಾದ್ಯಂತ ತೆರಿಗೆ ವಸೂಲಾತಿಗೆ ವಿಶೇಷ ಅಭಿಯಾನ ನಡೆಸಲಾಗುತ್ತಿದ್ದು, ಆ ದಿನ ತಾಪಂ ಕಾರ್ಯನಿರ್ವಹಣಾಧಿಕಾರಿ ಸಹಿತ ಎಲ್ಲ ಹಿರಿಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಗ್ರಾಪಂ ಎಲ್ಲ ಸಿಬ್ಬಂದಿ ಭಾಗವಹಿಸಿ ಹೆಚ್ಚಿನ ತೆರಿಗೆ ವಸೂಲಾತಿ ಮಾಡುವಂತೆ ಕ್ರಮ ಕೈಗೊಳ್ಳಲಾಗಿತ್ತು.
ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ನರೇಗಾ ಹಾಗೂ ಎನ್‌ಆರ್‌ಎಲ್‌ಎಮ್ ಸಂಘದ ಮಹಿಳೆಯರನ್ನು ಸಹ ತೊಡಗಿಸಿಕೊಳ್ಳಲಾಗಿತ್ತು. ಡಿ. 5ರಿಂದ ಜ. 5ರ ವರೆಗೆ ತೆರಿಗೆ ವಸೂಲಾತಿ ಮಾಸ ಆಚರಿಸಿ ಹೆಚ್ಚಿನ ತೆರಿಗೆ ವಸೂಲಾತಿ ಮಾಡಲಾಯಿತು. ಅಲ್ಲದೇ ಸಿಇಒ ಹಾಗೂ ಉಪ ಕಾರ್ಯದರ್ಶಿ ಸತತವಾಗಿ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಿದ್ದರು. ಈ ಎಲ್ಲ ಕಾರಣದಿಂದ ಮುಂಡಗೋಡ ಈ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಗಿದೆ.ಉತ್ತರಕನ್ನಡಕ್ಕೆ ಮೊದಲ ಸ್ಥಾನ
ಕಾರವಾರ ತಾಲೂಕು ಶೇ. 93, ಶಿರಸಿ 92 ಮತ್ತು ಸಿದ್ದಾಪುರ ಶೇ. 89 ಗುರಿ ಸಾಧಿಸುವ ಮೂಲಕ ರಾಜ್ಯದ ಟಾಪ್ 10ರ ಪಟ್ಟಿಯಲ್ಲಿವೆ. ಇದರೊಂದಿಗೆ ಜಿಲ್ಲಾವಾರು ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಶೇ. 85 ಕರ ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ.ಮೊದಲನೆ ಸ್ಥಾನ
ಸಿಇಒ ಈಶ್ವರಕುಮಾರ ಕಾಂದೂ ಅವರ ಸತತ ಮಾರ್ಗದರ್ಶನ, ಎಲ್ಲ ಪಿಡಿಒ ಹಾಗೂ ಎಲ್ಲ ಸಿಬ್ಬಂದಿ ಅವಿರತ ಪ್ರಯತ್ನ ಹಾಗೂ ಜನತೆಯ ಸಹಕಾರದಿಂದ ತಾಲೂಕು ತೆರಿಗೆ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ಮೊದಲನೆ ಸ್ಥಾನದಲ್ಲಿರಲು ಸಾಧ್ಯವಾಗಿದೆ.
-ಟಿ.ವೈ. ದಾಸನಕೊಪ್ಪ, ಮುಂಡಗೋಡ ಕಾರ್ಯನಿರ್ವಹಣಾಧಿಕಾರಿವಿಶೇಷ ಅಭಿಯಾನ
ಜಿಲ್ಲೆಯಲ್ಲಿ ಗ್ರಾಪಂ ಮಟ್ಟದ ತೆರಿಗೆ ಸಂಗ್ರಹಕ್ಕೆ ವಿಶೇಷ ಅಭಿಯಾನದ ಮೂಲಕ ಒತ್ತು ನೀಡಲಾಗಿತ್ತು. ಅದರಂತೆ ಮುಂಡಗೋಡ ತಾಲೂಕು 100 ಪ್ರತಿಶತ ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು, ಈ ಸಾಧನೆಗೆ ಅಧಿಕಾರಿ ಮತ್ತು ಸಿಬ್ಬಂದಿ ಸಂಘಟಿತ ಪ್ರಯತ್ನ ಕಾರಣವಾಗಿದೆ.
ಈಶ್ವರಕುಮಾರ ಕಾಂದೂ, ಸಿಇಒ