ಆರ್‌.ಅಶೋಕ ಸೇರಿದಂತೆ 43 ಜನರ ವಿರುದ್ಧ ಕೈ ದೂರು

| Published : Jan 05 2024, 01:45 AM IST

ಆರ್‌.ಅಶೋಕ ಸೇರಿದಂತೆ 43 ಜನರ ವಿರುದ್ಧ ಕೈ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಇದೊಂದು ಪೂರ್ವನಿಯೋಜಿತ ಹೋರಾಟ. ಅಪರಾಧ ಎಸಗುವ ಉದ್ದೇಶದಿಂದ ಈ ರೀತಿ ನಾಗರಿಕ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು

ಹುಬ್ಬಳ್ಳಿ: ರಾಮಜನ್ಮಭೂಮಿ ಹೋರಾಟಗಾರ ಎಂದು ಹೇಳುತ್ತಿರುವ ಬಂಧನಕ್ಕೊಳಗಾಗಿರುವ ರೌಡಿಶೀಟರ್‌ ಶ್ರೀಕಾಂತ ಪೂಜಾರಿ ಪರವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವಹೇಳನಕಾರಿಯಾಗಿ ನಿಂದಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ ಇಲ್ಲಿನ ಶಹರ ಠಾಣೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ 43 ಜನರ ವಿರುದ್ಧ ದೂರು ದಾಖಲಿಸಿದೆ. 3 ಪ್ರತ್ಯೇಕ ದೂರು ಸಲ್ಲಿಸಲಾಗಿದೆ.

16 ಕೇಸ್‌ ದಾಖಲಾಗಿರುವ ಕ್ರಿಮಿನಲ್‌ ಪರವಾಗಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆರ್‌.ಅಶೋಕ ನೇತೃತ್ವದಲ್ಲಿ ಬರೋಬ್ಬರಿ 6 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಹಾಗೂ ಇನ್ಸಪೆಕ್ಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳಿಗೆ ಸಿದ್ರಾಮುಲ್ಲಾಖಾನ್‌, ಸಿದ್ದರಾಮಯ್ಯ ಲುಚ್ಚಾ ಎಂದೆಲ್ಲ ಅಪಮಾನಕಾರಿಯಾಗಿ ನಿಂದಿಸಿದ್ದಾರೆ. ಮುಖ್ಯಮಂತ್ರಿಗಳ ಜಾತಿ ನಿಂದನೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದೊಂದು ಪೂರ್ವನಿಯೋಜಿತ ಹೋರಾಟ. ಅಪರಾಧ ಎಸಗುವ ಉದ್ದೇಶದಿಂದ ಈ ರೀತಿ ನಾಗರಿಕ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ, ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್‌, ಎಂ.ಆರ್‌. ಪಾಟೀಲ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ ಸೇರಿದಂತೆ 43 ಜನರ ವಿರುದ್ಧ ದೂರು ಸಲ್ಲಿಸಿದ್ದಾರೆ. ಇವರ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಹಾಗೂ ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ ಹೀಗೆ ಒಟ್ಟು ಮೂರು ದೂರು ಸಲ್ಲಿಸಲಾಗಿದೆ.

ಈ ವೇಳೆ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೀಪಾ ಗೌರಿ, ಸದಾನಂದ ಡಂಗನವರ, ಸತೀಶ ಮೇರವಾಡೆ, ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ನಾಗೇಶ ಕಲಬುರ್ಗಿ, ರಾಜಶೇಖರ ಮೆಣಸಿನಕಾಯಿ, ದೊರೈರಾಜ ಮನಕುಂಟ್ಲಾ ಸೇರಿದಂತೆ ಹಲವರಿದ್ದರು.