ಸಾರಾಂಶ
ಐಡಿಬಿಐ ಬ್ಯಾಂಕ್ ಮಾರಾಟ ಪ್ರತಿನಿಧಿ ಸೂರಜ್ ಸಾಗರ ತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.ಇದನ್ನು ಸ್ವತಃ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ವಿಕಾಸಕುಮಾರ ಅವರೇ ಬಹಿರಂಗಪಡಿಸಿದ್ದಾರೆ.
ಬಾಗಲಕೋಟೆ : ಪ್ರವಾಸೋದ್ಯಮ ಇಲಾಖೆಯಲ್ಲಿ ₹2.47 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಐಡಿಬಿಐ ಬ್ಯಾಂಕ್ ಮಾರಾಟ ಪ್ರತಿನಿಧಿ ಸೂರಜ್ ಸಾಗರ ತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.
ಇದನ್ನು ಸ್ವತಃ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ವಿಕಾಸಕುಮಾರ ಅವರೇ ಬಹಿರಂಗಪಡಿಸಿದ್ದಾರೆ.ಕೇವಲ ಪ್ರವಾಸೋದ್ಯಮ ಇಲಾಖೆಯಲ್ಲಿ ಮಾತ್ರ ಅಕ್ರಮ ಹಣವನ್ನು ವರ್ಗಾವಣೆ ಮಾಡಿಲ್ಲ. ಕೈ ಮಗ್ಗ ಇಲಾಖೆ, ಹಿಂದುಳಿದ ವರ್ಗದ ಇಲಾಖೆಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ಆರೋಪಿ ಸೂರಜ್ ಸಗರ ಒಪ್ಪಿಕೊಂಡಿದ್ದಾನೆ ಎಂದು ಬಾಗಲಕೋಟೆಯಲ್ಲಿ ಸೋಮವಾರ ನಡೆದಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಪ್ರಕರಣದಲ್ಲಿ ಅನೇಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಸರ್ಕಾರದ ಕೈ ಮಗ್ಗ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ಆರೋಪಿ ಸೂರಜ್ ಸಗರ ಒಪ್ಪಿಕೊಂಡಿದ್ದು, ಇನ್ನೂ ಹಲವರಿಗೆ ಶೋಧ ಮುಂದುವರಿಸಿದ್ದಾಗಿ ಅವರು ತಿಳಿಸಿದರು.ಪ್ರವಾಸೋದ್ಯಮ ಇಲಾಖೆ ಹಣ ಅವ್ಯವಹಾರ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲಾಖೆ ಉಪ ನಿರ್ದೇಶಕ ಗೋಪಾಲ ಹಿತ್ತಲಮನಿ ದೂರು ನೀಡಿದ್ದಾರೆ. ಮುಖ್ಯ ಆರೋಪಿ ಸೂರಜ್ ಸಗರನನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಅನೇಕ ವಿಷಯಗಳು ಬಹಿರಂಗಗೊಂಡಿದೆ ಎಂದರು.ಮೊದಲು ಹಣ ವರ್ಗಾವಣೆಯಾದ ಮಹೇಶ ಜಾಲವಾದಿ ಅವರನ್ನು ಕರೆಯಿಸಿ ವಿಚಾರಿಸಿದಾಗ ಕಿರಣ ಝಿಂಗಾಡೆಯನ್ನು ಕರೆಸಿದಲ್ಲಿ ಸತ್ಯ ಹೊರಗೆ ಬರುತ್ತದೆ ಎಂದಿದ್ದರು.
ನಂತರ ವಿಚಾರಣೆಗೆ ಒಳಪಡಿಸಿದಾಗ ಹಲವು ಖಾತೆಗಳಿಗೆ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಇಬ್ಬರ ಜೊತೆಗೆ ಮಂಜುನಾಥ ಕೋಟಿ, ಪ್ರವೀಣ ವೇತಾಳ, ಅರುಣ ನಾಯ್ಕರ, ಶರಣಪ್ಪ ಬಸನಗೌಡರ ಸೇರಿ ಏಳು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಮುಖ್ಯ ಆರೋಪಿ ಸೂರಜ ಸಗರ ವಿಚಾರಣೆ ವೇಳೆ ತನಗೆ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಒಂದು ಸ್ಕೀಮ್ ಇದೆ. ಅದರಲ್ಲಿ ಹಣ ಹಾಕಿದರೆ ಹಣ ಡಬಲ್ ಆಗುತ್ತದೆ. ಒಂದು ವರ್ಷದಲ್ಲಿ ಹಣ ದುಪ್ಪಟ್ಟಾಗುತ್ತದೆ ಅಂತ ತಿಳಿಸಿದ್ದರು. ಹೀಗಾಗಿ ಮನೆ, ಪರಿಚಯದವರಿಂದ ಹಣ ಹಾಕಿಸು ಅಂತ ಹೇಳಿದ್ದಾರೆ. ಕೊನೆಗೆ ಪ್ರವಾಸೋದ್ಯಮ ಇಲಾಖೆಯ ಖಾತೆಗಳಿಂದ ಇವರ ಖಾತೆಗೆ ಹಣ ಹಾಕಿದ್ದಾನೆ. ಇಲಾಖೆ ಹಣವೆಂದು ಗೊತ್ತಾಗಿದ್ದರೂ ಸಹ ಹಣ ವರ್ಗಾವಣೆಯಾಗಿದೆ. ಅಲ್ಲದೆ ವಿಥ್ ಡ್ರಾ ಮಾಡಿಸಿ ನಾವೆಲ್ಲ ಹಂಚಿಕೊಳ್ಳುತ್ತಿದ್ದೆವು ಎಂದೂ ಆರೋಪಿ ತಿಳಿಸಿದ್ದಾನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಮರನಾಥ ರೆಡ್ಡಿ, ಪೊಲೀಸ್ ಅಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಇತರರು ಇದ್ದರು.
ಮನೆಗೆ ಬೆಂಕಿ ಕೇಸ್: ಮೂವರ ಬಂಧನ
ಜು.16 ರಂದು ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಆಸ್ತಿ, ಅನೈತಿಕತೆ, ಮಾಟಮಂತ್ರದ ಕಾರಣಕ್ಕೆ ಈ ಘಟನೆ ನಡೆದಿರುವುದು ಕಂಡು ಬಂದಿದೆ. ಪ್ರಕರಣದಲ್ಲಿ ಅಮೀನಸಾಬ ಸಿರಾಜಸಾಬ ಪೆಂಡಾರಿ, ಬಾಬಾಲಾಲ ಸಿರಾಜ ಪೆಂಡಾರಿ, ಜಾಕೀರಹುಸೇನ ನದಾಫ್ ಮೂರು ಜನ ಆರೋಪಿತರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಬಳಸಿದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರಗತಿಯಲ್ಲಿ ತನಿಖೆ ಕೈಗೊಂಡಿದ್ದಕ್ಕೆ ಪ್ರಸಂಶೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಸುಪಾರಿ ಕಿಲ್ಲರ್ ಗ್ಯಾಂಗ್ ಪತ್ತೆ
ಕಲಾದಗಿ, ಕೆರೂರು ಪೊಲೀಸ್ ಠಾಣೆ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಯ ಪ್ರಕರಣಗಳನ್ನು ಬೇಧಿಸಲಾಗಿದ್ದು, ಸುಫಾರಿ ಕಿಲ್ಲರ್‌ಗಳನ್ನು ಬಂಧಿಸಲಾಗಿದೆ. ಪ್ರಕಾಶ ಮಾದರ, ಬಸವರಾಜ ಮಾದರ, ಗಣೇಶ ಮಾದರ, ಮಂಜುನಾಥ ಮಾದರ, ಭೀರಪ್ಪ ಬರಗಿ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಲಾಗಿದೆ. ಬಂಧಿಸಿದ ಬಳಿಕ ಈ ಗ್ಯಾಂಗ್ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದಾಗಿ ತಿಳಿಸಿದರು.