ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಿಂದೂಸ್ತಾನ್ ಪೇಪರ್ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್)ಗೆ ವಹಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಡಿ. ದೇವರಾಜ ಅರಸು ಅಮಹಿಂದ ಮತ್ತು ಶೋಷಿತ ವರ್ಗಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಆರ್. ವೇಣುಗೋಪಾಲ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರಸಭೆ ವಾರ್ಡ್ ನಂ.29ರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯ 3ನೇ ಕ್ರಾಸ್‌ನಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅಮಹಿಂದ (ಅಲ್ಪಸಂಖ್ಯಾತ, ಮಹಿಳಾ, ಹಿಂದುಳಿದ ಮತ್ತು ದಲಿತ ವರ್ಗಗಳು) ಮತ್ತು ಶೋಷಿತ ವರ್ಗಗಳ ಒಕ್ಕೂಟದ ಉದ್ಘಾಟನೆ, ಸ್ವಚ್ಛತಾ ಕಾರ್ಯ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರಕ್ಕೆ ಇದುವರೆಗೂ ಎಂಪಿಎಂ ಕಾರ್ಖಾನೆಯನ್ನು ಸರ್ಕಾರದ ಅನುದಾನದಲ್ಲಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚುನಾವಣೆ ಸಂದರ್ಭ ಎಂಪಿಎಂ ಕಾರ್ಖಾನೆ ಅಭಿವೃದ್ಧಿಪಡಿಸುವುದಾಗಿ ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದು, ಅದರಂತೆ ಕಾರ್ಖಾನೆ ಅಭಿವೃದ್ಧಿಗೆ ಮುಂದಾಗಬೇಕು. ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಾವು ಅವರೊಂದಿಗೆ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಎಂಪಿಎಂ ಕಾರ್ಖಾನೆಯನ್ನು ಕೇಂದ್ರದ ಅಧೀನದಲ್ಲಿರುವ ಹಿಂದೂಸ್ತಾನ್ ಪೇಪರ್ ಕಾರ್ಪೋರೇಷನ್ ಲಿಮಿಟೆಡ್‌ಗೆ ವಹಿಸಿಕೊಡಲು ಮುಂದಾಗಬೇಕು. ಆ ಮೂಲಕ ನಗರದ ನಿರುದ್ಯೋಗಿ ಯುವ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಟ್ಟು ನಗರ ಅಭಿವೃದ್ಧಿ ಹೊಂದಲು ನೆರವಾಗಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಕೆ. ಸುಬ್ರಮಣಿ ಮಾತನಾಡಿ, 25 ವರ್ಷಗಳಿಂದ ಉದ್ಯಾನವನ ಮಕ್ಕಳ ರೀತಿ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ಮುಂದಿನ ದಿನಗಳಲ್ಲಿ ಆಸಕ್ತರು, ಯುವ ಸಮುದಾಯದವರು ಈ ಉದ್ಯಾನವನ ನಿರ್ವಹಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಮುಖಂಡ ವಿಶ್ವೇಶ್ವರ ರಾವ್ ಗಾಯಕ್ವಾಡ್‌ ಮಾತನಾಡಿದರು. ಪ್ರಮುಖರಾದ ಗಿರಿನಾಯ್ಡು, ಚಂದ್ರಶೇಖರ್, ಪ್ರಸನ್ನ, ಮುರುಗನ್, ಸ್ಥಳೀಯರಾದ ಮಾರ್ಗರೇಟ್, ಜಯಕ್ಕ, ಚಾಂದು, ಉದಯಕುಮಾರ್, ನರಸಿಂಹಯ್ಯ, ಭಾಗ್ಯವತಿ, ಉಮಾ ಹಾಗೂ ನಗರಸಭೆ ಪೌರಕಾರ್ಮಿಕರು ಸಹಿತ ಇತರರು ಉಪಸ್ಥಿತರಿದ್ದರು.