ಪೆನ್‌ ಡ್ರೈವ್‌ ಪ್ರಕರಣ ಸಿಬಿಐಗೆ ವಹಿಸಿ; ಜೆಡಿಎಸ್‌ ಆಗ್ರಹ

| Published : May 16 2024, 12:48 AM IST / Updated: May 16 2024, 01:10 PM IST

ಪೆನ್‌ ಡ್ರೈವ್‌ ಪ್ರಕರಣ ಸಿಬಿಐಗೆ ವಹಿಸಿ; ಜೆಡಿಎಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಅಶ್ಲೀಲ ಪೆನ್‌ ಡ್ರೈವ್‌ ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

 ಶಿವಮೊಗ್ಗ :  ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧಿತ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಕೆ. ಬಿ.ಪ್ರಸನ್ನಕುಮಾರ್‌ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮಹಿಳೆಯರ ಮಾನಹಾನಿಗೆ ಕಾರಣವಾಗಿರುವ ಅಶ್ಲೀಲ ವಿಡಿಯೋಗಳ ಹಂಚಿಕೆ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸುಮಾರು 25 ಸಾವಿರ ಪೆನ್ ಡ್ರೈವ್ ಗಳ ಮೂಲಕ ಹಂಚಲಾಗಿದೆ. ಇದರಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿದ್ದು, ಅವರನ್ನು ವಜಾಗೊಳಿಸಬೇಕು. ಮಾತ್ರವಲ್ಲ, ಸೋರಿಕೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸನ್ನು ಹಾಳು ಮಾಡಲು ಹಾಗೂ ಜೆಡಿಎಸ್ ಪಕ್ಷ ನಿರ್ನಾಮ ಮಾಡಲು ಈ ಸಂಚು ರೂಪಿಸಲಾಗಿದೆ. ಡಿ.ಕೆ.ಶಿವಕುಮಾರ್‌ ಇದರ ಮಾಸ್ಟರ್‌ ಮೈಂಡ್. ಎಸ್ಐಟಿ ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಯವರ ಅಣತಿಯಂತೆ ಇದು ನಡೆಯುತ್ತಿದೆ. ಎಸ್‌ಐಟಿ ತನಿಖೆಯಿಂದ ಏನೂ ಉಪಯೋಗವಾಗುವುದಿಲ್ಲ. ಹೀಗಾಗಿ ಇದನ್ನು ರದ್ದುಪಡಿಸಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ರಾಜ್ಯ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ನರಸಿಂಹ ಗಂಧದಮನೆ, ಎಚ್.ಎಂ. ಸಂಗಯ್ಯ, ತ್ಯಾಗರಾಜ್, ರಾಜಣ್ಣ, ಸಿದ್ದಪ್ಪ, ಗೀತಾ ಸತೀಶ್, ಪುಷ್ಪಾವತಿ, ಲೋಹಿತ್, ಗೋಪಿ, ಮೊದಲಾದವರಿದ್ದರು.