2017ನೇ ಸಾಲಿನಲ್ಲಿ ಸರ್ಕಾರ ಪ್ರತ್ಯೇಕವಾಗಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯದ ಅಭಿವೃದ್ಧಿಗೆ ಅನುದಾನವನ್ನು ಕಲ್ಪಿಸಿತು. ಆದರೆ ಬಡವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೆಲವು ನಮ್ಮದೇ ಸಮುದಾಯದ ಪ್ರಭಾವಿ ವ್ಯಕ್ತಿಗಳು ದುರ್ಬಳಕೆ ಮಾಡಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡಿದ್ದಾರೆ. ಸರ್ಕಾರದ ಹಣ ಲೂಟಿ ಹೊಡೆದಿರುವ ದ್ರೋಹಿಗಳಿಗೆ ಶಿಕ್ಷೆಯಾಗಬೇಕೆಂದು ಹೋರಾಟ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 2017 ರಿಂದ 2024ರವರೆಗೆ ನಡೆದಿರುವ ನೂರಾರು ಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಮುದಾಯದ ಜನರೊಟ್ಟಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಭೋವಿ ವಡ್ಡರ ಸಂಘರ್ಷ ಸಮಿತಿ ಗೌರವಾಧ್ಯಕ್ಷ ಮುನಿನಾರಾಯಣಪ್ಪ ತಿಳಿಸಿದರು.

ನಗರದ ಚೈತನ್ಯ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿದ್ದು, ಪ್ರತಿಭಟನೆಯ ಸಂದರ್ಭದಲ್ಲಿ ಆ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದರ ಬಗ್ಗೆ ಹಲವಾರು ಹಗರಣ ದಾಖಲಾತಿಗಳೇ ಹೇಳುತ್ತಿವೆ. ಸರ್ಕಾರ ಎಸ್.ಐ.ಟಿ. ತನಿಖೆ ಕೂಡ ನಡೆಸುತ್ತಿದೆ. ಸಮುದಾಯದ ಬಡವರಿಗೆ ಸೇರಬೇಕಾದ ₹190 ಕೋಟಿಯಷ್ಟು ಹಣ ಪೋಲಾಗಿದೆ. ಬಡವರಿಗೆ ನಿಗಮದ ಅನುದಾನ ಬಳಕೆಯಾಗಿಲ್ಲ. ಆ ಹಣ ಸಿಓಡಿ ತನಿಖೆಯಾದರೂ ಇನ್ನೂ ಏನಾಗಿದೆ ಎಂಬುದಾಗಿ ತಿಳಿಯುತ್ತಿಲ್ಲ. ತಪ್ಪಿಸ್ಥತರಿಗೆ ಶಿಕ್ಷೆಯಾಗಿಲ್ಲ. ಇದರಲ್ಲಿ ಭಾಗಿಯಾಗಿರುವ ಕಿಂಗ್ ಪಿನ್ ಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂಘಟನೆ ಹೋರಾಟದ ಮೂಲಕ ಒತ್ತಾಯಿಸಲಿದೆ ಎಂದು ತಿಳಿಸಿದರು.

ಸಮುದಾಯದ ಕಡುಬಡವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೆಲವು ನಮ್ಮದೇ ಸಮುದಾಯದ ಪ್ರಭಾವಿಗಳು, ದಲ್ಲಾಳಿಗಳು ದುರ್ಬಳಕೆ ಮಾಡಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡಿ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ಭ್ರಷ್ಟಾಚಾರ ನಡೆಸಿದವರು ನಿಗಮದಲ್ಲಿ ಏನು ಆಗಲೇ ಇಲ್ಲ ಎಂದು ರಾಜರೋಷದಿಂದ ಓಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಮ್ಮ ಜನಾಂಗದವರು ನೂರಾರು ವರ್ಷಗಳಿಂದ ಬಿಸಿಲಿಗೆ ಮೈ- ಬೆನ್ನು ಕೊಟ್ಟು ದುಡಿದು ಉಳ್ಳವರಿಗೆ ಕಟ್ಟಡಗಳು, ಬಾವಿಗಳು, ಕೆರೆಕಟ್ಟೆಗಳು, ಗುಡಿಗೋಪುರಗಳು, ಬೆಟ್ಟಗಳನ್ನು ಒಡೆದು ಕಲ್ಲು, ಜಲ್ಲಿ, ತಂದು ಅನೇಕ ಕಟ್ಟಡಗಳನ್ನು, ರಸ್ತೆ ಚರಂಡಿಗಳು, ಹತ್ತು ಹಲವು ಕಾಮಗಾರಿಗಳನ್ನು ಮಾಡುತ್ತಾ ತೊಡಲು ಬಟ್ಟೆ ಇಲ್ಲದೇ, ನಿಲ್ಲಲು ಶಾಶ್ವತ ನೆಲ ಇಲ್ಲದೇ, ಊರೂರು ಅಲೆಯುತ್ತಾ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಲು ಸಾಧ್ಯವಿಲ್ಲದೇ, ಜೀವನ ನಡೆಸುತ್ತಿದ್ದಾರೆ. ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ಕುಲದ್ರೋಹಿಗಳಿಗೆ ಸರಿಯಾದ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಮುದಾಯ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧವೇ ಹೊರತು ಸರ್ಕಾರದ ವಿರುದ್ಧ ಅಲ್ಲ ಎಂದು ಮುನಿನಾರಾಯಣಪ್ಪ ಹೇಳಿದರು.

ಕರ್ನಾಟಕ ಭೋವಿ ವಡ್ಡರ ಸಂಘರ್ಷ ಸಮಿತಿ ಅಧ್ಯಕ್ಷ ಗೌತಮ್ ವೆಂಕಿ ಮಾತನಾಡಿ, ಸಮುದಾಯದ ಸಂಪತ್ತನ್ನು ನುಂಗಿದ ಕದೀಮರಿಗೆ ಹಾಗೂ ಅವರಿಗೆ ಸಹಕರಿಸಿದವರಿಗೆ ಶಿಕ್ಷೆಯಾಗಬೇಕು. ಭ್ರಷ್ಟಾಚಾರ ಮಾಡಿ ಸಂಪಾದಿಸಿದ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸಮುದಾಯದ ಬಡವರಿಗೆ ಸಿಗಬೇಕಾದ ಅನುದಾನ ಸಿಗಬೇಕು. ರಾಜ್ಯದ ಎಲ್ಲಾ ತಾಲೂಕುಗಳಿಗೆ ಬಿಡುಗಡೆಯಾದ ಹಣ ಸರಿ ಸಮವಾಗಿ ಹಂಚಿಕೆ ಮಾಡದೇ ವಂಚನೆ ಮಾಡಿದವರ ಮೇಲೆ ಈ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ವಂಚನೆ ಮಾಡಿದ ವ್ಯಕ್ತಿಗಳನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ನಿಗಮಕ್ಕೆ ₹1 ಸಾವಿರ ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ರಾಯಚೂರು ಜಿಲ್ಲೆ, ಸಿಂಧನೂರು ತಾಲೂಕಿನಲ್ಲಿ ₹2 ಕೋಟಿ ಹಗರಣ ಮಾಡಿ ಬಡವರಿಗೆ ಕೊಡದೇ ಉಳ್ಳವರಿಗೆ 60 ಎಕರೆ ಭೂ ಒಡೆತನ ಯೋಜನೆಯಲ್ಲಿ ನೀಡಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸಲಾಗುತ್ತಿದೆ ಎಂದರು.

ಕರ್ನಾಟಕ ಭೋವಿ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಡಿ. ಕುಮಾರ್ ಮಾತನಾಡಿ, 2017ನೇ ಸಾಲಿನಲ್ಲಿ ಸರ್ಕಾರ ಪ್ರತ್ಯೇಕವಾಗಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯದ ಅಭಿವೃದ್ಧಿಗೆ ಅನುದಾನವನ್ನು ಕಲ್ಪಿಸಿತು. ಆದರೆ ಬಡವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೆಲವು ನಮ್ಮದೇ ಸಮುದಾಯದ ಪ್ರಭಾವಿ ವ್ಯಕ್ತಿಗಳು ದುರ್ಬಳಕೆ ಮಾಡಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡಿದ್ದಾರೆ. ಸರ್ಕಾರದ ಹಣ ಲೂಟಿ ಹೊಡೆದಿರುವ ದ್ರೋಹಿಗಳಿಗೆ ಶಿಕ್ಷೆಯಾಗಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದರು.

ಈ ಹೋರಾಟದಲ್ಲಿ ಜಿಲ್ಲೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಹೋರಾಟಕ್ಕೆ ಸಮುದಾಯದ 500ಕ್ಕೂ ಹೆಚ್ಚು ಜನರು ಭಾಗವಹಿಸದ್ದೇವೆ. ವಿಚಾರವಂತರು, ಸಾಹಿತಿಗಳು, ವಿದ್ವಾಂಸರು, ಯುವ ಸಮುದಾಯ, ಬುದ್ಧಿ ಜೀವಿಗಳು ಈ ಹೋರಾಟಕ್ಕೆ ಬೆಂಬಲ ನೀಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಭೋವಿ ವಡ್ಡರ ಸಂಘರ್ಷ ಸಮಿತಿ ರಾಜ್ಯ ಯುವ ಘಟಕ ಅಧ್ಯಕ್ಷ ರಾಮಸಾಗರ ಕೃಷ್ಣ, ರಾಜ್ಯ ಸಮಿತಿ ಸದಸ್ಯರಾದ ಶ್ರೀನಿವಾಸ್, ಮುನಿಯಪ್ಪ, ಪ್ರದೀಪ್, ವೆಂಕಟೇಶ್, ಮುನಿರಾಜು ಇದ್ದರು.