ಧರ್ಮಸ್ಥಳ ವಿರುದ್ಧ ಷಡ್ಯಂತ್ರ ತನಿಖೆ ಎನ್ಐಎಗೆ ಒಪ್ಪಿಸಿ

| Published : Aug 26 2025, 01:02 AM IST

ಸಾರಾಂಶ

ಹಿಂದೂಗಳ ಪವಿತ್ರ, ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡನೀಯ. ಗಿರೀಶ ಮಟ್ಟಣ್ಣನವರ್, ಮಹೇಶ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಜನರಷ್ಟೇ ಅಲ್ಲ, ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸೆಂಥಿಲ್ ಎಂಬ ವ್ಯಕ್ತಿ ಸಹ ಇದ್ದು, ಆತ ಹಿಂದೆ ಮಂಗಳೂರು ಡಿಸಿಯೂ ಆಗಿದ್ದ. ಎಡಪಂಥೀಯದ ಆತನನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಲಾಯಿತು.

- ತಮಿಳುನಾಡು ಸೆಂಥಿಲ್ ಬಂಧನಕ್ಕೆ ರೇಣುಕಾಚಾರ್ಯ ಒತ್ತಾಯ । ಬಿಜೆಪಿ ಉತ್ತರ ಕ್ಷೇತ್ರದಿಂದ ಪ್ರತಿಭಟನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೂಗಳ ಪವಿತ್ರ, ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡನೀಯ. ಗಿರೀಶ ಮಟ್ಟಣ್ಣನವರ್, ಮಹೇಶ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಜನರಷ್ಟೇ ಅಲ್ಲ, ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸೆಂಥಿಲ್ ಎಂಬ ವ್ಯಕ್ತಿ ಸಹ ಇದ್ದು, ಆತ ಹಿಂದೆ ಮಂಗಳೂರು ಡಿಸಿಯೂ ಆಗಿದ್ದ. ಎಡಪಂಥೀಯದ ಆತನನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಧರ್ಮೋ ರಕ್ಷತಿ ರಕ್ಷಿತಃ.., ನಮ್ಮ ಪೂಜ್ಯರು ನಮ್ಮ ಹೆಮ್ಮೆ ಎಂಬ ಭಿತ್ತಿಪತ್ರ ಹಿಡಿದು ಧರ್ಮಸ್ಥಳದ ಉಳಿವಿಗಾಗಿ ಧರ್ಮಯುದ್ಧ ಎಂಬುದಾಗಿ ಘೋಷಣೆ ಕೂಗುತ್ತಾ ತೆರಳಿ, ಅಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಮಾಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆಯಲ್ಲಿ ಮಾತನಾಡಿ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರುದ್ಧದ ಷಡ್ಯಂತ್ರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹಿಂದೂ ಧರ್ಮವಿರೋಧಿ, ವಿಕೃತ ಮನಸ್ಸಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ 224 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಹಿಂದೂ ದೇವಸ್ಥಾನಗಳು, ಮಠಗಳ ಮೇಲೆ ವಿಕೃತ ಮನಸ್ಸಿನ ಕಾಂಗ್ರೆಸ್ಸಿನ ಎಡ ಪಂಥೀಯರು ನಿರಂತರ ದಾಳಿ ಮಾಡುತ್ತಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬ ಬುರುಡೆ ತಂದು ಎಸ್‌ಪಿ ಎದುರಿಗೆ ತೋರಿಸಿ, ನೂರಾರು ಜನರಿಗೆ ಹೂತಿದ್ದೇನೆ ಎನ್ನುತ್ತಿದ್ದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು ಘೋರ ದುರಂತ. ಮುಖ್ಯಮಂತ್ರಿ, ಗೃಹ ಮಂತ್ರಿಗಳು ರಾಜ್ಯದ ಜನತೆ ಮುಂದೆ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದರು.

ಬ್ಯಾಂಕ್‌ಗಳು ಸಣ್ಣ ಸಾಲ ನೀಡುವುದಕ್ಕೂ ನೂರೆಂಟು ದಾಖಲೆ, ಜಾಮೀನು ಕೇಳುತ್ತವೆ. ಆದರೆ, ಧರ್ಮಸ್ಥಳ ಕ್ಷೇತ್ರ, ಸಂಸ್ಥೆ ನೆರವಿನಡಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿವೆ. ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರೇರಣೆಯಾಗಿದ್ದಾರೆ. ಕೇವಲ ಯ್ಯೂಟರ್ ಸಮೀರ್ ಮಾತ್ರವಲ್ಲ, ರಾಷ್ಟ್ರ, ಅಂತಾರಾಷ್ಟ್ರೀಯ ದುಷ್ಟಶಕ್ತಿಗಳು ಈ ಷಡ್ಯಂತ್ರದ ಹಿಂದಿದ್ದಾರೆ. ತಮಿಳುನಾಡಿನ ಕಾಂಗ್ರೆಸ್ ಸಂಸದನೂ ಇದರ ಹಿಂದಿದ್ದಾರೆ. ಇಡೀ ಧರ್ಮಸ್ಥಳ ಪ್ರಕರಣ‍ವನ್ನು ಎನ್ಐಎಗೆ ಒಪ್ಪಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಕೆ.ಎಂ.ಸುರೇಶ, ಆರ್.ಎಲ್.ಶಿವಪ್ರಕಾಶ, ಪಿ.ಸಿ.ಶ್ರೀನಿವಾಸ ಭಟ್, ಜಯಪ್ರಕಾಶ ಮಾಗಿ, ಮಾಜಿ ಮೇಯರ್‌ ಎಸ್.ಟಿ.ವೀರೇಶ, ಕೆ.ಪ್ರಸನ್ನಕುಮಾರ, ಆರ್.ಶಿವಾನಂದ, ಸುರೇಶ ಗಂಡುಗಾಳೆ, ಟಿಪ್ಪು ಸುಲ್ತಾನ್, ಶಿವಪ್ರಕಾಶ, ಧನಂಜಯ ಕಡ್ಲೇಬಾಳು ಇತರರು ಪ್ರತಿಭಟನೆಯಲ್ಲಿದ್ದರು.

- - -

-25ಕೆಡಿವಿಜಿ6, 7.ಜೆಪಿಜಿ:

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಎನ್ಐಎಗೆ ಒಪ್ಪಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಿ, ಎಸಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿತು.