ರಾಜಕೀಯವಾಗಿ ಎದುರಿಸಲಾಗದೆ ಸ್ಟಿಂಗ್‌ ಆಪರೇಷನ್‌ನಂತಹ ತಂತ್ರಗಳಿಗೆ ಮೊರೆ ಹೋಗುವುದು ನೈತಿಕ ಅಧಃಪತನ. ವ್ಯಕ್ತಿಗಳನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು, ಇಂತಹ ಕೃತ್ಯಗಳ ಮೂಲಕ ಅವರ ರಾಜಕೀಯ ಭವಿಷ್ಯ ಮೊಟಕುಗೊಳಿಸುವುದು ಆತಂಕಕಾರಿ.

ಹುಬ್ಬಳ್ಳಿ:

ಸ್ಟಿಂಗ್‌ ಆಪರೇಷನ್‌ ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು. ದೃಶ್ಯಗಳನ್ನು ಪ್ರಸಾರ ಮಾಡಿದವರಷ್ಟೇ ಅಲ್ಲ, ಅವುಗಳನ್ನು ಸಿದ್ಧಪಡಿಸಿದವರು, ಹಣ ಒದಗಿಸಿದವರು ಹಾಗೂ ಇದರ ಹಿಂದಿರುವವರನ್ನೂ ಪತ್ತೆ ಹಚ್ಚಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಎದುರಿಸಲಾಗದೆ ಸ್ಟಿಂಗ್‌ ಆಪರೇಷನ್‌ನಂತಹ ತಂತ್ರಗಳಿಗೆ ಮೊರೆ ಹೋಗುವುದು ನೈತಿಕ ಅಧಃಪತನ. ವ್ಯಕ್ತಿಗಳನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು, ಇಂತಹ ಕೃತ್ಯಗಳ ಮೂಲಕ ಅವರ ರಾಜಕೀಯ ಭವಿಷ್ಯ ಮೊಟಕುಗೊಳಿಸುವುದು ಆತಂಕಕಾರಿ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸಿ:

ಐವರು ಸಚಿವರ ಮೇಲೆ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಿಂದ, ಅವರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಕೇವಲ ಮುಖ್ಯಮಂತ್ರಿಗಳು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದರೆ ಸತ್ಯ ಸಂಪೂರ್ಣವಾಗಿ ಹೊರಬರುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ಸಚಿವರ ವಿರುದ್ಧದ ಆರೋಪಗಳ ತನಿಖೆ ನಡೆಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ತನಿಖೆ ಆರಂಭವಾಗಿ ವಾರ ಕಳೆದಿದ್ದರೂ ಪ್ರಗತಿ ಆಮೆಗತಿಯಲ್ಲಿದೆ. ಸ್ಟಿಂಗ್‌ ದೃಶ್ಯಗಳ ಪ್ರಸಾರಕರನ್ನು ಪತ್ತೆ ಹಚ್ಚುವುದಕ್ಕೆ ಸೀಮಿತವಾಗದೆ, ಅವುಗಳ ಸೃಷ್ಟಿಯ ಹಿಂದಿನ ಜಾಲವನ್ನು ಬಯಲಿಗೆಳೆಯಬೇಕು. ಇಂತಹ ಕೃತ್ಯಗಳು ವ್ಯವಸ್ಥಿತವಾಗಿ ಬೆಳೆಯುತ್ತಿದ್ದು, ತಪ್ಪು ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ ಎಂಬ ಮನೋಭಾವಕ್ಕೆ ಕಡಿವಾಣ ಹಾಕಲು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಹೇಳಿದರು.