ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿರುವ ಎಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಕಡ್ಡಾಯವಾಗಿ ತಪ್ಪದೆ ಮತದಾನ ಮಾಡಿ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ಉಮೇಶ್ ರವರು ತಿಳಿಸಿದರು.ಪಟ್ಟಣದ ತಾಪಂ ಕಚೇರಿ ಮುಂಭಾಗ ತಾಪಂ ಮತ್ತು ತಾಲ್ಲೂಕು ಸ್ವೀಪ್ ಸಮಿತಿ, ಪಟ್ಟಣ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಯಳಂದೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ 2024ರ ಹಿನ್ನೆಲೆಯಲ್ಲಿ "ಚುನಾವಣಾ ಪರ್ವ ದೇಶದ ಗರ್ವ " ಎಂಬ ಘೋಷವಾಕ್ಯ ದೊಂದಿಗೆ ಆಯೋಜಿಸಿದ ಮತದಾನ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ತಾಪಂ ಇಒ ಆರ್. ಉಮೇಶ್ ಚಾಲನೆ ನೀಡಿ ಮಾತನಾಡಿದರು.ಪ್ರತಿ ಗ್ರಾಮಗಳ ಮತಗಟ್ಟೆ ಕೇಂದ್ರಗಳಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ವಿಶೇಷ ಶೌಚಾಲಯ, ಗಾಲಿ ಕುರ್ಚಿ, ರ್‍ಯಾಪ್, ಭೂತ ಕನ್ನಡಿ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಎಲ್ಲಾರು ತಮ್ಮ ಅಮೂಲ್ಯವಾದ ಮತವನ್ನು ತಪ್ಪದೆ ಚಲಾಯಿಸಿ ಎಂದು ತಿಳಿಸಿದರು.ನಗರದ ಪ್ರಮುಖ ಬೀದಿಗಳಲ್ಲಿ ತಾಲೂಕು ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತೆಯರು, ನಗರ ಮತ್ತು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆಯರು, ಅಂಗವಿಕಲರು ಹಾಗೂ ಅಂಗವಿಕಲ ಪೋಷಕರಿಂದ ಮೆರವಣಿಗೆ ನಡೆಸಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಮತದಾನ ಮಾಡಿ ಹಾಗೂ ತಮ್ಮ ಕುಟುಂದ ಸದಸ್ಯರಿಗೂ ಮತದಾನ ಮಾಡುವಂತೆ ತಿಳಿಸಿ ಸದೃಢ ಭಾರತ ನಿರ್ಮಾಣಕ್ಕಾಗಿ ಸಹಕಾರಿಸಿ ಎಂದು ತಿಳಿಸಿದರು.ಇದೇ ವೇಳೆ ತಾಲೂಕು ಯೋಜನಾಧಿಕಾರಿ ಗುರು ಮಹದೇವ, ತಾಪಂ ಕಚೇರಿ ವ್ಯವಸ್ಥಾಪಕ ವೆಂಕಟಾಚಲ, ತಾಲೂಕು ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತೆ ಮಹದೇವಮ್ಮ, ನಗರ ಪುನರ್ ವಸತಿ ಕಾರ್ಯಕರ್ತೆ ಮಹದೇವಮ್ಮ, ತಾಪಂ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.