ಕಟೀಲು ಶಾಲೆಯಲ್ಲಿ ಕೈತೋಟ ಪಾಠ

| Published : Jun 16 2024, 01:53 AM IST

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ನಡೆದ ಕೈತೋಟ ಪಾಠ ಕಾರ‍್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮಾರುಕಟ್ಟೆಯಿಂದ ದುಡ್ಡುಕೊಟ್ಟು ತರುವ ರಾಸಾಯನಿಕ ಬಳಸಿದ ತರಕಾರಿಗಳು ನಮ್ಮ ಊಟದ ಬಟ್ಟಲನ್ನು ವಿಷಮಯ ಮಾಡುತ್ತಿವೆ. ಹಾಗಾಗಿ ಮನೆಯಂಗಳದಲ್ಲಿ, ಟೇರೇಸಿನಲ್ಲಿ ಇರುವ ಪುಟ್ಟ ಸ್ಥಳಾವಕಾಶದಲ್ಲೇ ನಾವೇ ತರಕಾರಿ ಬೆಳೆಯಬಹುದು. ಸಾವಯವ ತರಕಾರಿ ನಮಗೆ ಆರೋಗ್ಯವನ್ನೂ, ತೃಪ್ತಿಯನ್ನೂ ನೀಡುತ್ತದೆ. ಕೃಷಿಪಾಠ ಅಭಿಯಾನವನ್ನು ವಿದ್ಯಾರ್ಥಿಗಳೇ ಯಶಸ್ವಿಗೊಳಿಸಬೇಕೆಂದು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ನಡೆದ ಕೈತೋಟ ಪಾಠ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಸಾವಯವ ಕೃಷಿಕ ಹರಿಕೃಷ್ಣ ಕಾಮತ್ ಮಾತನಾಡಿ, ತರಕಾರಿ ಗಿಡಗಳನ್ನು, ಹೂವಿನ ಗಿಡಗಳನ್ನು ಬೆಳೆಯುವುದರಿಂದ ಮನೆಯ ಪರಿಸರವೂ ಚೆನ್ನಾಗಿರುತ್ತದೆ. ಆರೋಗ್ಯದಾಯಕವಾದ ಆಹಾರವೂ ನಮಗೆ ಸಿಗುತ್ತದೆ. ಆದಾಯವನ್ನೂ ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಅಭ್ಯಾಸ. ಕೃಷಿಕರಾಗುವುದೆಂದರೆ ಹೆಮ್ಮೆ ಎಂದು ಹೇಳಿದರು.

ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳನ್ನು, ಬೀಜಗಳನ್ನು ವಿತರಿಸಲಾಯಿತು. ಆಸಕ್ತ ವಿದ್ಯಾರ್ಥಿಗಳಿಗೆ ತರಕಾರಿ ಬೆಳೆಯಲು ಕೈತೋಟ ರಚಿಸಲು ಇನ್ನೂ ಮಾರ್ಗದರ್ಶನ ಮಾಡಲಾಗುವುದು, ಸಸಿ, ಬೀಜಗಳನ್ನು ಉಚಿತವಾಗಿ ನೀಡಲಾಗುವುದು. ಉತ್ತಮ ಕೈತೋಟ ರಚಿಸಿದ ಐವರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದು ರತ್ನಾಕರ್ ಮಾಹಿತಿ ನೀಡಿದರು.ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ದಿನೇಶ್ ರಾವ್ ಸಿತ್ಲ, ಪುರುಷೋತ್ತಮ ಕೋಟ್ಯಾನ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಸುಮಾವತಿ, ರಾಜಶೇಖರ್ ಎಸ್, ಚಂದ್ರಶೇಖರ ಭಟ್, ಗಿರೀಶ್ ತಂತ್ರಿ, ಸರೋಜಿನಿ ಮತ್ತಿತರರಿದ್ದರು.