ವಿಜಯಪುರ : ಕೈಮಗ್ಗ ಭಾರತದ ಶ್ರೀಮಂತ ಪರಂಪರೆಯ ಸಂಕೇತ - ಶಿಕ್ಷಕ, ಸಾಹಿತಿ ಸಂತೋಷ ಬಂಡೆ

| Published : Aug 08 2024, 01:49 AM IST / Updated: Aug 08 2024, 09:18 AM IST

ಸಾರಾಂಶ

 ಯುವಕರು ಕೈಮಗ್ಗದ ಬಟ್ಟೆಗಳನ್ನು ಧರಿಸಲು ಮತ್ತು ಕೈಮಗ್ಗದ ಬಟ್ಟೆಗಳಿಂದ ತಮ್ಮ ಮನೆಗಳನ್ನು ಅಲಂಕರಿಸಲು ಪ್ರೋತ್ಸಾಹಿಸುವುದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ವಿಶಿಷ್ಟ ಕಲೆ ಮತ್ತು ವೈವಿದ್ಯತೆಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಹೇಳಿದರು.

 ವಿಜಯಪುರ :  ಯುವಕರು ಕೈಮಗ್ಗದ ಬಟ್ಟೆಗಳನ್ನು ಧರಿಸಲು ಮತ್ತು ಕೈಮಗ್ಗದ ಬಟ್ಟೆಗಳಿಂದ ತಮ್ಮ ಮನೆಗಳನ್ನು ಅಲಂಕರಿಸಲು ಪ್ರೋತ್ಸಾಹಿಸುವುದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ವಿಶಿಷ್ಟ ಕಲೆ ಮತ್ತು ವೈವಿದ್ಯತೆಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೇಗದ ಫ್ಯಾಷನ್ ಮತ್ತು ಬೃಹತ್ ಜವಳಿ ಯುಗದಲ್ಲಿ, ಕೈಮಗ್ಗದ ಉತ್ಪನ್ನಗಳನ್ನು ಉತ್ತೇಜಿಸುವುದು ಹೆಚ್ಚು ಸಮರ್ಥನೀಯ ಹೆಜ್ಜೆಯಾಗಿದೆ. ಕೈಮಗ್ಗ ನೇಯ್ಗೆಯು ಪರಿಸರ ಪ್ರಜ್ಞೆಯ ಉತ್ತೇಜನಕಾರಿ ಪ್ರಕ್ರಿಯೆಯಾಗಿದ್ದು, ಅದು ಭಾರತದ ಶ್ರೀಮಂತ ಪರಂಪರೆಯ ಸಂಕೇತವಾಗಿದೆ ಎಂದರು.ಗೃಹಿಣಿ ಸುನಂದಾ ಬಂಡೆ ಮಾತನಾಡಿ, ಕೈಮಗ್ಗ ಉತ್ಪನ್ನಗಳ ಸೌಂದರ್ಯ, ಮೌಲ್ಯ ಮತ್ತು ಮಹತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯವನ್ನು ಸಶಕ್ತಗೊಳಿಸಬೇಕಾಗಿದೆ.

 ಕೈಮಗ್ಗದ ಉತ್ಪನ್ನಗಳ ಬಳಕೆ ಹೆಚ್ಚಾದಾಗ ಮಾತ್ರ ಈ ಉದ್ಯಮ ಬೆಳೆಯಲು ಸಾಧ್ಯ ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ಹಲವಾರು ಹಳ್ಳಿಗಳಲ್ಲಿ ಈಗಲೂ ಕೈಮಗ್ಗಗಳ ನೇಯ್ಗೆ ಕಾರ್ಯ ಜೀವಂತವಾಗಿದ್ದು, ನಾವೀನ್ಯತೆ, ಸೃಜನಶೀಲತೆ ಮತ್ತು ಹೊಸ ದೃಷ್ಟಿಕೋನದಿಂದ ಈ ಕಾರ್ಯ ಮುಂದೆ ಸಾಗಬೇಕಾಗಿದೆ. 

ಕೈಮಗ್ಗದ ಜವಳಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ, ನಾವು ಈ ಸಾಂಪ್ರದಾಯಿಕ ಕರಕುಶಲತೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದರು.ಈ ವೇಳೆ ಸುಭಾಸ ಬಂಡೆ, ಸುರೇಶ ಕತ್ನಳ್ಳಿ, ಸಂಜೀವ ಬಂಡೆ, ಭುವನೇಶ್ವರಿ ಬಂಡೆ, ನೀಲಮ್ಮ ಬಂಡೆ, ಸುರೇಖಾ ಬಂಡೆ, ಕಸ್ತೂರಿ ವಗ್ಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ವೇಳೆ ಕೈಮಗ್ಗದ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.