ಕರಕುಶಲ ವಸ್ತುಗಳ ತಯಾರಿಕೆ ಶಿಬಿರ, ಜಾಗೃತಿ ಶಿಬಿರಕ್ಕೆ ಚಾಲನೆ

| Published : May 11 2025, 01:30 AM IST

ಕರಕುಶಲ ವಸ್ತುಗಳ ತಯಾರಿಕೆ ಶಿಬಿರ, ಜಾಗೃತಿ ಶಿಬಿರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ಹಾಗೂ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಶಿಬಿರದ ಧ್ಯೇಯೋದ್ದೇಶಗಳ ಕುರಿತು ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೇಂದ್ರ ಸರ್ಕಾರದ‌ ಕರಕುಶಲ ಮತ್ತು ಜವಳಿ ಮಂತ್ರಾಲಯ ಇಲಾಖೆಯ ಮೈಸೂರಿನ ಕರಕುಶಲ ವಿಸ್ತರಣಾ ಸೇವಾ ಕೇಂದ್ರದ ವತಿಯಿಂದ ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ದಿನಗಳ ಕಾಲದ ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ಹಾಗೂ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ನ ನಿವೃತ್ತ ಪ್ರಬಂಧಕರಾದ ಆರ್.ಕೆ.ಬಾಲಚಂದ್ರ, ವೈವಿಧ್ಯಮಯ ಸಾಂಪ್ರದಾಯಿಕ

ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನವಾಗಿರುವ ಭಾರತ ದೇಶವು ಶ್ರೀಮಂತ ಕಲೆಯಾದ ಕರಕುಶಲ ಕಲೆಗೆ ಪ್ರಸಿದ್ಧಿಯಾಗಿದೆ.

ಭಾರತದ ಕರಕುಶಲ ವಸ್ತುಗಳು ಕರಕುಶಲವು ಕೈ ಉಪಕರಣಗಳೊಂದಿಗೆ ಕೈಯಿಂದ ವಸ್ತುಗಳನ್ನು ಸಂಸ್ಕರಿಸುವುದು ಪುರಾತನ ಕಾಲದಿಂದಲೂ ರೂಢಿಯಾಗಿ ಬಂದಿದೆ ಎಂದರು.

ಭಾರತೀಯ ಶ್ರೀಮಂತ ಕಲೆಯಾದ ಕರಕುಶಲ ಕಲೆಯು ತಲೆ ತಲೆಮಾರುಗಳಿಂದ ಬಂದಿದ್ದು, ಭಾರತದ ಕರಕುಶಲ ವಸ್ತಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ಕರಕುಶಲ ತರಬೇತಿಗಳನ್ನು ಪಡೆದವರಿಗೆ ವಿಫುಲವಾದ ಉದ್ಯೋಗವಕಾಶಗಳಿವೆ. ವಿದ್ಯಾರ್ಥಿಗಳು ಕರಕುಶಲ ಕಲೆಯಿಂದ ಕ್ರಿಯಾಶೀಲ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳಲು ಸಾಧ್ಯ ಎಂದು ಬಾಲಚಂದ್ರ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಮಜಲುಗಳನ್ನು‌ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಜಿಲ್ಲಾ ಸಂಯೋಜಕರೂ ಆದ ಕುಶಲಕರ್ಮಿ ಜಿ.ಧರ್ಮಪ್ಪ, ಈ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗಳಲ್ಲಿ ಇಂತಹ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದರು.

ಈ ಶಿಬಿರದಲ್ಲಿ ಬಿದಿರು ಕಲೆ, ಮರ ಕೆತ್ತನೆ, ಮಣ್ಣಿನ ಕಲಾಕೃತಿಗಳ ತಯಾರಿಕೆ ಸೇರಿದಂತೆ ಇನ್ನಿತರ ಕರಕುಶಲ ಕಲೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಮಾತನಾಡಿ, ಕರಕುಶಲ ಕಲೆಯಿಂದ ಆರ್ಥಿಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ದೇಶದ ಆರ್ಥಿಕಾಭಿವೃದ್ಧಿಗೆ ಕರಕುಶಲ ಕಲೆ ಕೂಡ ಸಹಕಾರಿಯಾಗಿವೆ ಎಂದರು.

ಶಿಬಿರದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದ ಸಚಿವಾಲಯದ ವಿಸ್ತರಣಾ ಕೇಂದ್ರದ ಅಭಿವೃದ್ಧಿ ಅಧಿಕಾರಿ ಎಂ.ಬಿ.ಶಾಬೀರ, ಕರಕುಶಲ ಕಲೆಯು ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ದಿಸೆಯಲ್ಲಿ ಇಂತಹ ಜಾಗೃತಿ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ತಮ್ಮ ಕಲಿಕೆಯೊಂದಿಗೆ ವೃತ್ತಿಪರ ಬದುಕಿಗೆ ಸಹಕಾರಿಯಾಗಿವೆ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕರಕುಶಲ ಕಲೆ ಹಾಗೂ ಕಲಾಕೃತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪಿಯೂ ಕಾಲೇಜಿನ ಪ್ರಾಂಶುಪಾಲ ಡಾ ಎನ್. ನಾಗೇಂದ್ರಸ್ವಾಮಿ, ಸಚಿವಾಲಯದ ಅಭಿವೃದ್ಧಿ ಅಧಿಕಾರಿ ಸ್ವದೇಶ್ ಘಾರ, ಸಿಬ್ಬಂದಿ ಎಚ್.ಜಿ.ಮಹೇಶ್ , ಕಾಲೇಜಿನ‌ ವಿದ್ಯಾರ್ಥಿಗಳು ಇದ್ದರು.