ಬಿವಿಟಿಯಲ್ಲಿ ಮಹಿಳೆಯರಿಗೆ ಕರಕುಶಲ ವಸ್ತುಗಳ ತರಬೇತಿ

| Published : Dec 18 2024, 12:46 AM IST

ಸಾರಾಂಶ

ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್‌ ಪ್ರಾಯೋಜಕತ್ವದಲ್ಲಿ ಆಸಕ್ತ ಗ್ರಾಮೀಣ ಮಹಿಳೆಯರಿಗೆ ೨೧ ದಿನಗಳ ಫ್ಯಾಷನ್ ರವಿಕೆ, ಕಸೂತಿ ಮತ್ತು ಸಾರಿ ಕುಚ್ಚು ತರಬೇತಿ ಹಾಗೂ ೧೦ ದಿನಗಳ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್‌ ಪ್ರಾಯೋಜಕತ್ವದಲ್ಲಿ ಆಸಕ್ತ ಗ್ರಾಮೀಣ ಮಹಿಳೆಯರಿಗೆ ೨೧ ದಿನಗಳ ಫ್ಯಾಷನ್ ರವಿಕೆ, ಕಸೂತಿ ಮತ್ತು ಸಾರಿ ಕುಚ್ಚು ತರಬೇತಿ ಹಾಗೂ ೧೦ ದಿನಗಳ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ರೋಬೋಸಾಫ್ಟ್ ಟೆಕ್ನಾಲಜೀಸಿನ ಮಾನವ ಸಂಪನ್ಮೂಲ ಪ್ರಬಂಧಕಿ ಲಕ್ಷ್ಮೀ ರಾಜೀವ ಶೆಟ್ಟಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಚಕ್ರಿ ಹೆಗ್ಡೆ ತರಬೇತಿಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಲಕ್ಷ್ಮೀ ರಾಜೀವ ಶೆಟ್ಟಿ, ಮಹಿಳೆಯರು ತಮ್ಮ ಕನಸನ್ನು ತಾವೇ ನನಸು ಮಾಡಬೇಕು. ಇದಕ್ಕಾಗಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಚಕ್ರಿ ಹೆಗ್ಡೆ ಮಾತನಾಡಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿ ಜಿಲ್ಲೆಯಲ್ಲಿ ವಿವಿಧ ತರಬೇತಿಗಳನ್ನು ಪ್ರಾಯೋಜಿಸುವ ಮೂಲಕ ಮಹಿಳಾ ಸಬಲೀಕರಣ ಮತ್ತು ಸರ್ಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಹಾಗೂ ಮುಂದಿನ ದಿನಗಳಲ್ಲಿಯೂ ಈ ಚಟುವಟಿಕೆ ಮುಂದುವರಿಯಲಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ್ ಪೈ ಮಾತನಾಡಿ, ಬೆಳೆಯುತ್ತಿರುವ ನಗರವಾದ ಉಡುಪಿ ಹಾಗೂ ಮಣಿಪಾಲದಂತಹ ಪ್ರದೇಶಗಳಲ್ಲಿ ಯಾವುದೇ ವ್ಯಾಪಾರ ವ್ಯವಹಾರ ಕೈಗೊಂಡರೂ ಉತ್ತಮವಾದ ಮಾರುಕಟ್ಟೆ ಲಭ್ಯವಿದೆ. ಬಂದಂತಹ ಅವಕಾಶಗಳನ್ನು ಸದುಪಯೋಗಿಸಿ ಮಹಿಳೆಯರು ಸ್ವಂತ ಉದ್ಯಮವನ್ನು ಸ್ಥಾಪಿಸುವಂತೆ ಕರೆ ನೀಡಿದರು.

ಈ ತರಬೇತಿಯಲ್ಲಿ ಸುಮಾರು ೬೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾದ ಮುಕ್ತಾ ಶ್ರೀನಿವಾಸ ಭಟ್, ರಶ್ಮಿ ಭಟ್, ಶ್ರೀಷ್ಮಾ, ರಮ್ಯ ಎ.ಸಿ. ಹಾಗೂ ಸನ್ನಿತಾ ಉಪಸ್ಥಿತರಿದ್ದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಬ್ಬಂದಿ ಗೀತಾ ಆರ್. ರಾವ್ ಪ್ರಾರ್ಥಿಸಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.