ಮದ್ದೂರು ತಾಲೂಕಿನ ನಿರಾಶ್ರಿತರನ್ನು ಗುರುತಿಸಿ ಸೂರು ಕಲ್ಪಿಸುತ್ತಿರುವ ಕಾರ್ಯ ಅನನ್ಯವಾಗಿದೆ. ಇದರಿಂದಾಗಿ ಹೊಸಬದುಕನ್ನು ಕಲ್ಪಿಸಿಕೊಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಂಸ್ಥೆಯು ಅನುಕೂಲ ಕಲ್ಪಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಜನರನ್ನು ಗುರುತಿಸಿ ಸೂರು ಕಲ್ಪಿಸುವ ಜೊತೆಗೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಸಂಘ ಸಂಸ್ಥೆಗಳ ಬೆಳವಣಿಗೆ ಶ್ಲಾಘನೀಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ತಿಳಿಸಿದರು.ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ನಿಸರ್ಗ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹುಲಿಗೆರಪುರ ಆಶ್ರಯದಲ್ಲಿ ಆಯೋಜಿಸಿದ್ದ ನಿರಾಶ್ರಿತರ ನಡೆ ವಸತಿ ಕಡೆ ನಿರಾಶ್ರಿತರಿಗೆ ನೆರಳು ಕಾರ್ಯಕ್ರಮದ ಅಂಗವಾಗಿ ಫಲಾನುಭವಿ ಲಕ್ಷ್ಮಮ್ಮ ಅವರಿಗೆ ಮನೆ ದಾಖಲಾತಿ ಹಾಗೂ ಮನೆ ಕೀ ಹಸ್ತಾಂತರಿಸಿ ಮಾತನಾಡಿದರು.
ತಾಲೂಕಿನ ನಿರಾಶ್ರಿತರನ್ನು ಗುರುತಿಸಿ ಸೂರು ಕಲ್ಪಿಸುತ್ತಿರುವ ಕಾರ್ಯ ಅನನ್ಯವಾಗಿದೆ. ಇದರಿಂದಾಗಿ ಹೊಸಬದುಕನ್ನು ಕಲ್ಪಿಸಿಕೊಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಂಸ್ಥೆಯು ಅನುಕೂಲ ಕಲ್ಪಿಸುತ್ತಿದೆ ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಮೊತ್ತೆಹಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರ ಜಮೀನು ಸೇರಿದಂತೆ ಅರಣ್ಯ ಭೂಮಿಗಳು ಕಣ್ಮರೆಯಾಗುತ್ತಿದೆ ಎಂದರು ವಿಷಾದಿಸಿದರು.
ನಿರಾಶ್ರಿತರನ್ನು ಗುರುತಿಸಿ ನಿವೇಶನ ಹಾಗೂ ಸೂರು ಸೌಲಭ್ಯ ಕಲ್ಪಿಸಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಇಂತಹ ಹಲವು ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಜರುಗಲಿ ಎಂದು ಆಶಿಸಿದರು.ಇದೇ ವೇಳೆ ಗ್ರಾಮದ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಈರಮ್ಮ ಅವರಿಗೆ ಸುಮಾರು 10 ಲಕ್ಷ ರು. ಮೌಲ್ಯದ ನೂತನ ಮನೆ ದಾಖಲಾತಿ ಹಾಗೂ ಮನೆ ಕೀ ಮತ್ತು ನಗರದ ಚನ್ನೇಗೌಡ ಬಡಾವಣೆ ನಿವಾಸಿ ಲಕ್ಷ್ಮಮ್ಮರಿಗೆ 8 ಲಕ್ಷ ರು. ವೆಚ್ಚದ ಮನೆಯನ್ನು ಹಸ್ತಾಂತರಿಸಲಾಯಿತು.
ನಿಸರ್ಗ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹುಲಿಗೆರೆಪುರ ಮಹದೇವು ಮಾತನಾಡಿದರು. ಈ ವೇಳೆ ವೈಭವ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಚ್.ಸಿ.ಪುಟ್ಟಲಿಂಗಯ್ಯ, ರೈತ ಕಲ್ಯಾಣ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಉಷಾ, ಜಯಶೀಲ, ಹುಚ್ಚಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಚೂರಿ ನಿಂಗಯ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಅಂತಾರಾಷ್ಟ್ರೀಯ ಜಾನಪದ ಗಾಯಕ ಡಾ.ಅಮ್ಮ ರಾಮಚಂದ್ರ ಜಿ.ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಶಂಕರ್, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಶಂಕರ್, ಗ್ರಾಪಂ ಮಾಜಿ ಸದಸ್ಯೆ ಬಿ.ಸಿ.ಲಕ್ಷ್ಮಿ ಮಹಾದೇವು ಹಾಜರಿದ್ದರು.