ಜಿಲ್ಲೆಯ ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಬೇಕು. ಜನರು ಉದ್ಯೋಗ ಇಲ್ಲದೇ ಬೇರೆ ಕಡೆಗೆ ಗುಳೆ ಹೋಗದಂತೆ ನೋಡಿಕೊಳ್ಳಬೇಕು.
ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಕನ್ನಡಪ್ರಭ ವಾರ್ತೆ ಗದಗಜಿಲ್ಲೆಯ ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಬೇಕು. ಜನರು ಉದ್ಯೋಗ ಇಲ್ಲದೇ ಬೇರೆ ಕಡೆಗೆ ಗುಳೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಬಿ. ವೆಂಕಟೇಶ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜರುಗಿದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬರಲಿರುವ ಹಿಂಗಾರಿನ ಕುರಿತು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬರ ಪರಿಸ್ಥಿತಿಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಾಗ ರೇಷ್ಮೆ ಕೃಷಿಗೆ ಹೆಚ್ಚು ಒತ್ತುಕೊಡಬೇಕು. ಪ್ರತಿ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯಡಿ 1 ಅಮೃತ ಸರೋವರ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ವಿತರಣೆ ಜೊತೆಗೆ ಔಷಚಾರಿಕ ಶಿಕ್ಷಣದ ಒದಗಿಸಬೇಕು. ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಬಿಡುಗಡೆಯಾದ ಅನುದಾನ ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದ ಕ್ರಮಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕೆಂದು ತಿಳಿಸಿದರು.ಜಿಪಂ ಸಿಇಒ ಮುಕುಲ್ ಜೈನ್ ಮಾತನಾಡಿ, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ 59 ಗ್ರಾಮಗಳನ್ನು ಗುರುತಿಸಲಾಗಿದೆ. ಎರಡು ಡಿಬಿಓಟಿ ಮತ್ತು 10 ಎಂವಿಎಸ್ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಕ್ಕೆ ನದಿ ಮೂಲದಿಂದ ನೀರು ಸರಬರಾಜು ಮಾಡುತ್ತಿದ್ದು, ಪ್ರಸ್ತುತ ಲಭ್ಯವಿರುವ ನೀರು ಡಿಸೆಂಬರ್ ಅಂತ್ಯದವರೆಗೆ ಕುಡಿಯುವ ನೀರಿನ ಕೊರತೆ ಇರುವುದಿಲ್ಲ ಎಂದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಜಿಲ್ಲೆಯಲ್ಲಿ ವಿಬಿಜಿ-ರಾಮ್ ಜಿ ಯೋಜನೆಯಡಿ 233844 ಕ್ರಿಯಾ ನೋಂದಾಯಿತ ಕೂಲಿಕಾರರಿದ್ದಾರೆ. 8044 ಮನರೇಗಾ ಮುಂದುವರೆದ ಕಾಮಗಾರಿಗಳಿವೆ ಎಂದು ಸಭೆಗೆ ತಿಳಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 118697.8 ಹೆಕ್ಟೇರ್ ಕೃಷಿ ಕ್ಷೇತ್ರ ಹಾಗೂ 6651.34 ತೋಟಗಾರಿಕೆ ಕ್ಷೇತ್ರ ಸೇರಿದಂತೆ ಒಟ್ಟಾರೆ 125349.14 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಕುರಿತು ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ನಿಂದ ಒಟ್ಟು ₹11574.46 ಲಕ್ಷ ನೆರವು ಕೋರಲಾಗಿದೆ. ರಸಗೊಬ್ಬರದ ವಿತರಣೆಯಲ್ಲಿ ಯಾವುದೇ ಕೊರತೆಯಿರುವುದಿಲ್ಲ. ಪ್ರಧಾನ ಮಂತ್ರಿ ಫಸಲ ಬಿಮಾ ಯೊಜನೆಯಡಿ 179116 ರೈತರ ನೋಂದಣಿಯಾಗಿದೆ ಎಂದು ವಿವರಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಯೋಜನಾ ನಿರ್ದೇಶಕ ಎಂ.ಎ. ಚಳಗೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಸ್ವಾಗತಿಸಿದರು.