ಮೊದಲ ಆದ್ಯತೆಯಾಗಿ ಜನ, ಜಾನುವಾರುಗಳಿಗೆ ನೀರು, ಮೇವು ಜತೆಗೆ ಉದ್ಯೋಗ ನೀಡಬೇಕು. ಎಲ್ ನಿನೋ ಪರಿಣಾಮದಿಂದ ಅನೇಕ ವರ್ಷಗಳಲ್ಲಿ ಕಂಡರಿಯದ ತೀವ್ರ ಬರಗಾಲವಿದೆ.
ಹೊಸಪೇಟೆ: ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲವಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಕುಡಿಯುವ ನೀರು, ಮೇವು ಮತ್ತು ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ನೀಡಲು ಕಂಟೆಂಜೆನ್ಸಿ ಪ್ಲಾನ್ ಮಾಡಲು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಬರ ನಿರ್ವಹಣಾ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.ಮೊದಲ ಆದ್ಯತೆಯಾಗಿ ಜನ, ಜಾನುವಾರುಗಳಿಗೆ ನೀರು, ಮೇವು ಜತೆಗೆ ಉದ್ಯೋಗ ನೀಡಬೇಕು. ಎಲ್ ನಿನೋ ಪರಿಣಾಮದಿಂದ ಅನೇಕ ವರ್ಷಗಳಲ್ಲಿ ಕಂಡರಿಯದ ತೀವ್ರ ಬರಗಾಲವಿದೆ. ಜಿಲ್ಲೆಯಲ್ಲಿ ಮೇವು ಬೆಳೆಯಲು ಕಿಟ್ ವಿತರಿಸಬೇಕಿತ್ತು, ಅದು 3-4 ಅಡಿ ಎತ್ತರ ಬೆಳೆಯಬೇಕಿತ್ತು. ಕೆಎಂಎಫ್ ನಿಂದ ಹಾಲು ಉತ್ಪಾದಕರ ಮೂಲಕ ಮೇವು ಬೆಳೆಗೆ ಆದ್ಯತೆ ನೀಡಬೇಕಿತ್ತು, ಆದರೆ ವಿಜಯನಗರ ಜಿಲ್ಲೆಯಲ್ಲಿ ಇದಾಗಿಲ್ಲ. 41 ವಾರಗಳಿಗೆ ಆಗುವಷ್ಟು ಮೇವು ಇದೆ ಎಂದು ಅಂಕಿ ಅಂಶ ನೀಡಿದ್ದು ಇದು ಹೇಗೆ ಸಾಧ್ಯ ಎಂದು ವಿವರಿಸಲು ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಿದರು.
ಸಭೆಗಳಲ್ಲಿ ಅಧಿಕಾರಿಗಳು ಮಂಡಿಸುವ ಅಂಕಿ-ಅಂಶಗಳು ವಾಸ್ತವಕ್ಕೆ ಹತ್ತಿರವಾಗಿರಬೇಕು. ಹಿಂದಿನ ವರ್ಷ ಹಾಗೂ ಪ್ರಸ್ತುತ ವರ್ಷದ ತುಲನಾತ್ಮಕ ಮಾಹಿತಿ ಅಧಿಕಾರಿಗಳ ಬೆರಳ ತುದಿಯಲ್ಲಿರಬೇಕು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಇಲಾಖಾವಾರು ಪೂರ್ವಭಾವಿ ಸಭೆ ನಡೆಸಿ ಸಿದ್ಧರಾಗಿ ಬರಬೇಕು ಎಂದು ತಾಕೀತು ಮಾಡಿದರು.ಸೂಪರ್ ಎಲ್ ನಿನೋ'''' ಪ್ರಭಾವದಿಂದ ಕಳೆದ 125 ವರ್ಷಗಳಲ್ಲೇ ಕಾಣದಂತಹ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಶೇ. 98 ರಷ್ಟು ಬೆಳೆ ಹಾನಿಯಾಗಿದ್ದು, ಪ್ರಮುಖ ಜಲಾಶಯಗಳು ಹಾಗೂ ಕೆರೆಗಳು ಬತ್ತಿಹೋಗಿವೆ. ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗುವ ಆತಂಕವಿದ್ದು, ಲಭ್ಯವಿರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರ ಕಡತಗಳ ತ್ವರಿತ ವಿಲೇವಾರಿ:ತಹಸೀಲ್ದಾರರು ಮತ್ತು ತಾಲೂಕು ಇಒಗಳು ಸಾರ್ವಜನಿಕರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರ ಪೌತಿ ಖಾತೆ, ಪೋಡಿ ಹಾಗೂ ಹಕ್ಕುಪತ್ರಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಸಲ್ಲದು. ರಾಜ್ಯಾದ್ಯಂತ ಲಕ್ಷಾಂತರ ಪೌತಿ ಖಾತೆ ಅರ್ಜಿಗಳು ಬಾಕಿ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಪ್ರತ್ಯೇಕವಾಗಿ ನಡೆಸುವುದಾಗಿ ಎಚ್ಚರಿಸಿದರು.15 ಲಕ್ಷ ನಿವೇಶನ ಹಂಚಿಕೆ ಮಹತ್ವಾಕಾಂಕ್ಷಿ ಯೋಜನೆ:ಸರ್ಕಾರವು ಬಡವರಿಗಾಗಿ 15 ಲಕ್ಷ ನಿವೇಶನ ನೀಡುವ ಬೃಹತ್ ಯೋಜನೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕು/ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 5,000 ನಿವೇಶನಗಳ ನಿರ್ಮಾಣಕ್ಕೆ ಅಗತ್ಯವಿರುವ ಸರ್ಕಾರಿ ಜಮೀನನ್ನು ಆದ್ಯತೆಯ ಮೇರೆಗೆ ಗುರುತಿಸಬೇಕು. ಆಯ್ದ ಸ್ಥಳಗಳಲ್ಲಿ ಮಾದರಿ ಗ್ರಾಮಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಎಂ.ಎಸ್. ದಿವಾಕರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಬಳ್ಳಾರಿ ಡಿ.ಸಿ. ನಾಗೇಂದ್ರ ಪ್ರಸಾದ್, ವಿಜಯನಗರ ಸಿಇಓ ಗರಿಮಾ ಪನ್ವಾರ್, ಬಳ್ಳಾರಿ ಸಿಇಓ ಮಹಮದ್ ಹ್ಯಾರೀಸ್ ಸುಮೇರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.