ಕೈಮಗ್ಗ ನಿಗಮ ಯಶಸ್ವಿ ಪಥದತ್ತ ಕೊಂಡೊಯ್ಯುವೆ

| Published : Oct 17 2025, 01:01 AM IST

ಸಾರಾಂಶ

ಕೈಮಗ್ಗ ಅಭಿವೃದ್ಧಿ ನಿಗಮದ ಯಶಸ್ಸಿಗೆ ಹಗಲಿರುಳು ಪ್ರಾಮಾಣಿಕನಾಗಿ ಶ್ರಮಿಸುವ ಮೂಲಕ ನಿಗಮವನ್ನು ಯಶಸ್ವಿ ಪಥದತ್ತ ಸಾಗುವಂತೆ ಮಾಡಲಾಗುವುದು ಎಂದು ನಾಗೇಂದ್ರಕುಮಾರ ಹೇಳಿದರು.

ಹುಬ್ಬಳ್ಳಿ:

ಇಲ್ಲಿನ ನೇಕಾರ ಕಾಲನಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನಾಗೇಂದ್ರಕುಮಾರ ಗುರುವಾರ ಅಧಿಕಾರ ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಮಗ್ಗ ಅಭಿವೃದ್ಧಿ ನಿಗಮದ ಯಶಸ್ಸಿಗೆ ಹಗಲಿರುಳು ಪ್ರಾಮಾಣಿಕನಾಗಿ ಶ್ರಮಿಸುವ ಮೂಲಕ ನಿಗಮವನ್ನು ಯಶಸ್ವಿ ಪಥದತ್ತ ಸಾಗುವಂತೆ ಮಾಡಲಾಗುವುದು ಎಂದರು.

ನಿಗಮದಲ್ಲಿ ಸದ್ಯ ಸುಮಾರು 175 ಸಿಲ್ಕ್‌ ಮತ್ತು 3260 ಕಾಟನ್ ಕೈಮಗ್ಗ ಸೇರಿದಂತೆ ಒಟ್ಟಾರೆ 3435 ಕೈಮಗ್ಗ ನೇಕಾರರಿದ್ದಾರೆ. ಈಗಾಗಲೇ 3868 ಮನೆಗಳನ್ನು ನೇಕಾರರಿಗೆ ಒದಗಿಸಲಾಗಿದೆ. ಅಲ್ಲದೇ 196 ಮನೆಗಳಿಗಾಗಿ ನೇಕಾರರಿಂದ ಬೇಡಿಕೆ ಸಲ್ಲಿಕೆಯಾಗಿವೆ. ಮುಂದಿನ ದಿನಗಳಲ್ಲಿ ನೇಕಾರರಿಗೆ ಮನೆ ನೀಡಲು ಕ್ರಮ ವಹಿಸಲಾಗುವುದು ಎಂದರು.

ಪುನಶ್ಚೇತನಕ್ಕೆ ಒತ್ತು:

ಕೈಮಗ್ಗದ ರೇಷ್ಮೆ ಸೀರೆ, ಶಾಲು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಶೇ. 20ರಿಂದ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೈಮಗ್ಗದ ವಸ್ತುಗಳಿಗೆ ಉತ್ಪಾದನೆಗಿಂತ ಹೆಚ್ಚಿನ ಬೇಡಿಕೆಯಿದೆ. ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದೇವೆ. ಕೈಮಗ್ಗದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದ ಅವರು, ಉದ್ಯಮಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ನೇಕಾರರ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತಿದೆ. ನೇಕಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ ಬಜೆಟ್‌ನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ₹10 ಕೋಟಿ ಅನುದಾನ ನೀಡಿದ್ದು ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ನಿಗಮಕ್ಕೆ ಕನಿಷ್ಠ ₹30 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಶಾಲೆಗಳಿಗೆ ಸಮವಸ್ತ್ರ ವಿತರಣೆ:

ನಿಗಮದಿಂದ ವಿದ್ಯಾ ವಿಕಾಸ ಯೋಜನೆಯಡಿ ಶಾಲೆಗಳಿಗೆ ಸಮವಸ್ತ್ರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರತಿ ಶಾಲೆಗಳಿಗೆ ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳನ್ನು ವಿತರಿಸಲು ಅವಕಾಶ ಮಾಡಿಕೊಡುವಂತೆ ಮನವರಿಕೆ ಮಾಡಲಾಗುತ್ತದೆ ಎಂದರು.

ಈ ವೇಳೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪಮ್ಮಾರ, ಜಂಟಿ ನಿರ್ದೇಶಕ ಶ್ರೀನಿವಾಸ, ಉಪನಿರ್ದೇಶಕಿ ಅನುಪಮಾ ಕೆ.ಎಸ್, ಗಣೇಶ, ಜಯರಾಮ್, ಸುರೇಶ, ಬಸವರಾಜ ಸೇರಿದಂತೆ ಹಲವರಿದ್ದರು.