Handover of 'Ashraya' houses by January is certain.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಅಗಸವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಬಡಾವಣೆಗೆ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನ ಪ್ರಗತಿಯಲ್ಲಿದ್ದು, ಫಲಾನುಭವಿಗಳು ಯಾವುದೇ ಭಯ, ಆತಂಕ ಪಡುವ ಅಗತ್ಯ ಇಲ್ಲ. ಬರುವ ಜನವರಿ ತಿಂಗಳ ಅಂತ್ಯದೊಳಗೆ ಮನೆ ಹಸ್ತಾಂತರಿಸುವ ಪ್ರಕ್ರಿಯೆ ಮುಗಿಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಫಲಾನುಭವಿಗಳಿಗೆ ಭರವಸೆ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 9 ವರ್ಷಗಳಿಂದ ಗೋವಿಂದಾಪುರ ಸೇರಿದಂತೆ ಇತರೆಡೆ ಆಶ್ರಯ ಮನೆ ನಿರ್ಮಾಣದ ಪ್ರಕ್ರಿಯೆ ನಡೆಯುತ್ತಿದೆ. ಗೋವಿಂದಾಪುರದಲ್ಲಿ ಜಿ ಪ್ಲಸ್ 2 ವಿನ್ಯಾಸದ ವಸತಿ ಸಮುಚ್ಛಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಿವೇಶನ ಹಂಚಿಕೆಗೆ ಕುರಿತು ಅಡೆತಡೆಗಳನ್ನು ನಿವಾರಣೆ ಮಾಡಲಾಗಿದೆ. ಅಧಿಕಾರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಫಲಾನುಭವಿಗಳು ತಮ್ಮ ಗೃಹಪ್ರವೇಶ ಮಾಡಲು ಅನುಕೂಲ ಕಲ್ಪಸಲು ಸೂಚಿಸಿದ್ದೇನೆ ಎಂದರು.

ಆರಂಭದಲ್ಲಿ ಪ.ಜಾ, ಪ.ಪಂ.ದವರಿಗೆ 5000 ರು. ಅರ್ಜಿ ಶುಲ್ಕ, ಸಾಮಾನ್ಯ ವರ್ಗದವರಿಗೆ ೮ ಸಾವಿರ ರು. ಇತ್ತು. ಈಗ ಎರಡು ಸಾವಿರ ರು. ಹೆಚ್ಚಾಗಿದೆ. ವ್ಯತ್ಯಾಸದ ಹಣ ಕೊಡುವವರು ಯಾರು ಎಂಬ ಯಕ್ಷ ಪ್ರಶ್ನೆ ಉಂಟಾಗಿದೆ. 3000 ಮನೆಗಳಿಗೆ 267.62 ಕೋಟಿ ರು. ಯೋಜನೆ ಇದಾಗಿದೆ ಎಂದರು.

ಆಶ್ರಯ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಬಡ ವರ್ಗದ ಫಲಾನುಭವಿಗಳು ಮನೆ ಪ್ರವೇಶಿಸುವ ಮುನ್ನ ವಿದ್ಯುತ್, ನೀರು ಸರಬರಾಜು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ. ಇಲ್ಲಿವರೆಗೆ 1272 ಮನೆಗಳು ಹಂಚಿಕೆಯಾಗಿವೆ. ಆದರೆ, ಈ ಮನೆಗಳಿಗೆ ಇ-ಸ್ವತ್ತು ಆಗುವುದರಲ್ಲಿ ತಾಂತ್ರಿಕ ತೊಡಕುಗಳಿದ್ದವು. ಬ್ಯಾಂಕ್ ಸಾಲ ತೆಗೆದುಕೊಳ್ಳಲು ತೊಡಕಾಗಿತ್ತು. ಅಗಸವಳ್ಳಿ ಗ್ರಾ.ಪಂ.ಗೆ ಕೋಟ್ಯಂತರ ರು. ಪಾವತಿ ಮಾಡಬೇಕಿತ್ತು. ಆದರೆ ತಾವು ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಸುಮಾರು 75 ಲಕ್ಷ ರು. ಪಾವತಿಯಾಗುವಂತೆ ಆಯಿತು. ಕಳೆದ ವಾರ ಅಲ್ಲಿಗೆ ಹೋದಾಗ ಕೇವಲ 108 ಮನೆಗಳ ಇ-ಸ್ವತ್ತು ಬಾಕಿ ಇತ್ತು ಎಂದರು.

22 ಸಲ ಸ್ಥಳ ಪರಿಶೀಲನೆ:

ತಾವು ಇಲ್ಲಿಯವರೆಗೆ 22 ಬಾರಿ ಸಂಬಂಧಿಸಿದ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿದ್ದು, ವಿಧಾನಸಭೆಯ ಅಧಿವೇಶನದಲ್ಲಿಯೂ ಈ ವಿಷಯ ಚರ್ಚಿಸಿದ್ದೇನೆ. ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಂದಿನ ಡಿಸಿ ಗುರುದತ್ತ ಹೆಗಡೆ, ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೊದಲಾದವರೊಡನೆ ಮಾತುಕತೆ ನಡೆಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡಲು ಹೊರಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು ವಿದ್ಯುತ್ ಸರಬರಾಜಿಗೂ ಮೆಸ್ಕಾಂ ಟೆಂಡರ್ ಕರೆದಿದೆ, ಎಸ್ ಟಿಪಿ ಪ್ಲಾಂಟ್ ನಿರ್ಮಾಣಕ್ಕೆ 4.5 ಕೋಟಿ ರು. ಟೆಂಡರ್ ಕರೆಯಲಾಗಿದೆ. ಗೋಪಶೆಟ್ಟಿಕೊಪ್ಪದಲ್ಲಿಯೂ ಆಶ್ರಯ ಸಮುಚ್ಛಯದ ನಿರ್ಮಾಣ ಪ್ರಗತಿಯಲ್ಲಿದೆ. ಅವಸರ ಬೇಡ. ಯಾರೂ ಭಯ ಪಡಬೇಕಾದ್ದಿಲ್ಲ ಎಂದು ಪುನರುಚ್ಛರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ಎಸ್.ಜ್ಞಾನೇಶ್ವರ್, ದೀನದಯಾಳ್, ಮಂಜುನಾಥ ನವುಲೆ, ಪ್ರಭಾಕರ, ಲತಾ ಶ್ರೀನಿವಾಸ್, ಎನ್.ಜೆ.ನಾಗರಾಜ್, ಸೋಮೇಶ್ ಶೇಟ್, ಸೆಲ್ವಂ, ಶ್ರೀನಾಗ್, ಶಿವಕುಮಾರ್ ಇದ್ದರು.

-----------------

ಪೊಟೋ: 22ಎಸ್‌ಎಂಜಿಕೆಪಿ01

ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು.