ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

| Published : Mar 24 2024, 01:37 AM IST

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ವಾತ್ಸಲ್ಯ ಮನೆ ಎಂಬುದು ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆ. ಅತ್ಯಂತ ಬಡ ನಿರ್ಗತಿಕ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಯೋಜನೆಯಾಗಿದೆ. ಇದರ ಅಡಿಯಲ್ಲಿ ಈಗಾಗಲೇ ಅನೇಕ ಬಡವರು ಪ್ರಯೋಜನ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹಾಗೂ ಊರವರ ಸಹಕಾರದೊಂದಿಗೆ ಬಡ ದಲಿತ ಸಮುದಾಯಕ್ಕೆ ಸೇರಿದ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿ ಕೊಟ್ಟಿರುವ ವಾತ್ಸಲ್ಯ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಯಿತು.

ಪುತ್ತೂರು ಆರ್ಯಾಪು ಗ್ರಾಮದ ಪಿಲಿಗುಂಡ ಎಂಬಲ್ಲಿನ ಬಡ ದಲಿತ ಕುಟುಂಬದ ಯಮುನಾ ಮತ್ತು ಅವರ ಪುತ್ರಿ ದೀಪ್ತಿ ಅವರ ಕುಟುಂಬಕ್ಕೆ ನೂತನ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಮನೆ ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿ ಬಡ ಕುಟುಂಬಕ್ಕೆ ಸೂರು ಕೊಡುವ ಮೂಲಕ ಬದುಕು ಕಟ್ಟಿಕೊಡುವ ಕೆಲಸ ಧರ್ಮಸ್ಥಳದಿಂದಾಗಿದೆ. ಬಡವರ, ನಿರ್ಗತಿಕರ ಕಷ್ಟಗಳಿಗೆ ಸದಾ ಸ್ಪಂದಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರ ಮಾಡುತ್ತಾ ಬಂದಿದೆ. ಪಿಲಿಗುಂಡದ ಈ ತಾಯಿ, ಮಗಳ ಬದುಕಿಗೆ ಈಗ ಆಸರೆಯೊಂದು ಸಿಕ್ಕಿದೆ ಎಂದರು. ಯಮುನಾ ಅವರ ಜೀವನ ನಿರ್ವಹಣೆಗೆ ಮಾಸಿಕ 1 ಸಾವಿರ ರುಪಾಯಿ ಮಾಸಾಶನ ನೀಡಲಾಗುತ್ತದೆ ಎಂದು ತಿಳಿಸಿದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ವಾತ್ಸಲ್ಯ ಮನೆ ಎಂಬುದು ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆ. ಅತ್ಯಂತ ಬಡ ನಿರ್ಗತಿಕ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಯೋಜನೆಯಾಗಿದೆ. ಇದರ ಅಡಿಯಲ್ಲಿ ಈಗಾಗಲೇ ಅನೇಕ ಬಡವರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಜಿ.ಮಹಾಬಲ ರೈ ವಳತ್ತಡ್ಕ, ಬಲ್ನಾಡು ವಲಯ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಜ್ಞಾನವಿಕಾಸ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಅಮೃತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಬಲ್ನಾಡು ವಲಯದ ಮಾಜಿ ವಲಯಾಧ್ಯಕ್ಷ ಅಂಬ್ರೋಸ್ ಡಿಸೋಜ, ವೈಎಂಸಿ ಅಧ್ಯಕ್ಷ ಶರೀಫ್ ಕುಂಜೂರುಪಂಜ, ಕುಂಜೂರುಪಂಜ ಒಕ್ಕೂಟದ ವಲಯಾಧ್ಯಕ್ಷ ಮಹಾಲಿಂಗ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮತ್ತು ವಿಪತ್ತು ನಿರ್ವಹಣ ಘಟಕ ಬಲ್ನಾಡು ವಲಯದ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ, ವಂದಿಸಿದರು.