ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಸ್ತಾಂತರ

| Published : May 19 2024, 01:49 AM IST

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮರಗೋಡು ನಿವಾಸಿ ಜಯಂತಿ ಅವರಿಗೆ ಸಹಾಯಧನ ನೀಡಲಾಯಿತು. ಸಂಘದ ಎಲ್ಲ ಸದಸ್ಯರ ಸಮೂಹದಲ್ಲಿ ಸಹಾಯಧನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಳೆದ ನಾಲ್ಕು ತಿಂಗಳ ಹಿಂದೆ ವಾಹನ ಅಪಘಾತಕ್ಕೀಡಾಗಿ ಪ್ರಸ್ತುತ ಮಲಗಿದಲ್ಲೇ ಇದ್ದು ಆರ್ಥಿಕವಾಗಿ ಬಹಳ ಕಷ್ಟದ ಜೀವನ ನಡೆಸುತ್ತಿರುವ ಮರಗೋಡು ನಿವಾಸಿ ಜಯಂತಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ನೀಡಲಾಯಿತು.

ಜಯಂತಿ ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇವರಿಗೆ ಯಾವುದೇ ಆದಾಯದ ಮೂಲ ಇರುವುದಿಲ್ಲ. ಜಯಂತಿ ಅವರು ಸುಮಾರು 15 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಕ್ರಿಯ ಸದಸ್ಯರಾಗಿದ್ದು ಇವರ ಈ ಸಂಕಷ್ಟದ ಸಮಯದಲ್ಲಿ ಇವರಿಗೆ ಸಹಾಯ ಮಾಡುವಂತೆ ಶ್ರೀ ಕ್ಷೇತ್ರಕ್ಕೆ ಮನವಿ ನೀಡಿದ್ದು ಮನವಿಗೆ ಸ್ಪಂದಿಸಿ ಕ್ಷೇತ್ರದಿಂದ 20, 000 ರು. ನಗದು ಸಹಾಯಧನ ಮಂಜೂರಾಗಿ ಬಂದಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ದಿನೇಶ್ ಬಿ. ಗೌಡ ಮಾಹಿತಿ ನೀಡಿದರು.

ಸಹಾಯಧನ ನೀಡುವ ಸಂದರ್ಭ ವಿರಾಜಪೇಟೆ ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ಬಿ ಗೌಡ ಹಾಗೂ ವಲಯದ ಮೇಲ್ವಿಚಾರಕರಾದ ಪ್ರತಾಪ್, ಸೇವಾ ಪ್ರತಿನಿಧಿ ಲತಾ ನೇತ್ರಾವತಿ, ಸಂಘದ ಎಲ್ಲ ಸದಸ್ಯರ ಸಮೂಹದಲ್ಲಿ ಸಹಾಯಧನವನ್ನು ಫಲಾನುಭವಿಗೆ ವಿತರಿಸಲಾಯಿತು.

ಕಳೆದ 2 ವರ್ಷಗಳಿಂದ ವಿರಾಜಪೇಟೆ ತಾಲೂಕಿನಲ್ಲಿ ಒಟ್ಟು 36 ಫಲಾನುಭವಿಗಳಿಗೆ 7,40, 000 ರು. ಸಹಾಯಧನ ವಿತರಿಸಲಾಗಿದೆ ಎಂದು ಈ ಸಂದರ್ಭ ತಿಳಿಸಿದರು.