ಸಾರಾಂಶ
ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ೨೩.೨೫ ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸುಮಾರು ೨೫ ಕೋಟಿ ರುಪಾಯಿ ವೆಚ್ಚದಲ್ಲಿ ಮುಂದಿನ ೩ ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಲಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಾಗದ ದಾಖಲೆಗಳ ಹಸ್ತಾಂತರ ಕಾರ್ಯಕ್ರಮ ಪುತ್ತೂರು ಆಡಳಿತ ಸೌಧದ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ದಾಖಲೆಗಳನ್ನು ಕರ್ನಾಟಕ ಕ್ರಿಕೆಟ್ ಅಸೋಶಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರಿಸಿದರು. ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ೨೩.೨೫ ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸುಮಾರು ೨೫ ಕೋಟಿ ರುಪಾಯಿ ವೆಚ್ಚದಲ್ಲಿ ಮುಂದಿನ ೩ ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿಯಾಗಿ ಕರ್ನಾಟಕ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಇವರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು ಹಾಗೂ ಕಂದಾಯ ಇಲಾಖೆ ಸರ್ವೆ ನಡೆಸಿ ಪರಿಶೀಲನೆ ಬಳಿಕ ಇದೀಗ ದಾಖಲೆ ಹಸ್ತಾಂತರ ಮಾಡಲಾಗುತ್ತಿದೆ. ೩೦ ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಜಾಗ ಹಸ್ತಾಂತರ ನಡೆಯಲಿದೆ ಎಂದರು. ಈ ಪ್ರಸ್ತಾವನೆ ಸರ್ಕಾರದಲ್ಲಿ ಬಾಕಿಯಾಗಿತ್ತು. ಇದೀಗ ಅದಕ್ಕೆ ಚಾಲನೆ ನೀಡಿಲಾಗಿದೆ. ಹಿಂದಿನ ಪ್ರಸ್ತಾವನೆಯಲ್ಲಿ ಕೇವಲ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮಾತ್ರ ಇತ್ತು. ಈ ಹಿನ್ನಲೆಯಲ್ಲಿ ಪ್ರಾರಂಭದಲ್ಲಿ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಇದೀಗ ಪ್ರಮುಖವಾದ ಎರಡು ಶರತ್ತುಗಳೊಂದಿಗೆ ಈ ನಿರ್ಮಾಣ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಜತೆಗೆ ಸ್ಥಳೀಯ ಯುವಕರಿಗೆ ಕ್ರಿಕೆಟ್ ಆಟವಾಡಲು ಮತ್ತೊಂದು ಮೈದಾನವೂ ನಿರ್ಮಾಣವಾಗಲಿದೆ. ಆದರೆ ಈ ಮೈದಾನದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಆಡಲು ಅವಕಾಶ ಇಲ್ಲ. ಓವರ್ ಆರ್ಮ್‌ಗೆ ಮಾತ್ರ ಅವಕಾಶ ಇದೆ. ನಾನು ಅಂಡರ್‌ಆರ್ಮ್ ಕ್ರಿಕೆಟ್ ವಿರೋಧಿಯಲ್ಲ. ಆದರೆ ಅಂಡರ್‌ಆರ್ಮ್ ಕ್ರಿಕೆಟ್‌ಗೆ ಸೀಮಿತ ಚೌಕಟ್ಟು ಇದೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕಾದರೆ ಓವರ್ ಆರ್ಮ್ ಕ್ರಿಕೆಟ್ ಅನಿವಾರ್ಯ ಎಂದು ಶಾಸಕ ಅಶೋಕ್ ಹೇಳಿದರು.ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಮಾತನಾಡಿ, ಪುತ್ತೂರಿಗೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಕನಸು ಈ ಮೂಲಕ ನೆರವೇರುತ್ತಿದೆ. ಒಂದಷ್ಟು ಶರತ್ತುಗಳ ಜತೆಗೆ ಸ್ಥಳದ ಆರ್‌ಟಿಸಿ, ನಕ್ಷೆ ಹಸ್ತಾಂತರ ಮಾಡಲಾಗಿದೆ. ಪುತ್ತೂರು ಉಪವಿಭಾಗದ ಈ ಮೈದಾನದಿಂದ ಯುವಕ್ರಿಕೆಟ್ ಪ್ರತಿಭೆಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಬಿ. ವಿಶ್ವನಾಥ ರೈ, ಉಮಾನಾಥ ಶೆಟ್ಟಿ ಪೆರ್ನೆ, ಅಮಲ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವ, ಕೆಎಸ್‌ಸಿಎ ಮಂಗಳೂರು ವಲಯದ ರತನ್, ವಿಶ್ವನಾಥ ನಾಯಕ್, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕೋಶಾಧಿಕಾರಿ ಶ್ರೀಕಾಂತ್ ಕೊಳತ್ತಾಯ, ತರಬೇತಿದಾರ ಎಲಿಯಾಸ್ ಪಿಂಟೊ, ಸದಸ್ಯ ವಾಮನ ಪೈ, ಪ್ರತಾಪ್ ಉಪಸ್ಥಿತರಿದ್ದರು.