ಸಾರಾಂಶ
ರಾಜ್ಯ ಬಿಜೆಪಿಯಿಂದ ವಕ್ಫ್ ಅಧ್ಯಯನ ತಂಡದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರ ಹೆಸರು ಸೇರ್ಪಡೆಗೆ ತಮ್ಮ ವಿರೋಧವಿದ್ದು, ಅವರ ಹೆಸರನ್ನು ಕೂಡಲೇ ತಂಡದಿಂದ ಕೈಬಿಡಬೇಕು ಎಂದು ಬಿಜೆಪಿ ಪಂಚಾಯತ್ ರಾಜ್ಯ ಪ್ರಕೋಷ್ಟ ಜಿಲ್ಲಾ ಸಂಚಾಲಕ ಎಂ.ಆರ್.ಮಹೇಶ್ ಒತ್ತಾಯಿಸಿದರು.
ಹೊನ್ನಾಳಿ: ರಾಜ್ಯ ಬಿಜೆಪಿಯಿಂದ ವಕ್ಫ್ ಅಧ್ಯಯನ ತಂಡದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರ ಹೆಸರು ಸೇರ್ಪಡೆಗೆ ತಮ್ಮ ವಿರೋಧವಿದ್ದು, ಅವರ ಹೆಸರನ್ನು ಕೂಡಲೇ ತಂಡದಿಂದ ಕೈಬಿಡಬೇಕು ಎಂದು ಬಿಜೆಪಿ ಪಂಚಾಯತ್ ರಾಜ್ಯ ಪ್ರಕೋಷ್ಟ ಜಿಲ್ಲಾ ಸಂಚಾಲಕ ಎಂ.ಆರ್.ಮಹೇಶ್ ಒತ್ತಾಯಿಸಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಬರ ಅಧ್ಯಯನ ತಂಡ ಅಂದಿನ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಮತ್ತು ಈಗಿನ ಸಂಸದ ವಿಶ್ವೇಶ್ವರಹೆಗ್ಡೆ ಕಾಗೇರಿ ನೇತೃತ್ವದಲ್ಲಿ ಅಂದಿನ ಸಂಸದ ಜಿ.ಎಂ.ಸಿದ್ದೇಶ್ವರ್, ಎಂಎಲ್ಸಿ ನವೀನ್ ಮತ್ತಿತರ ಮುಖಂಡರು ತಾಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ಯಾವುದೇ ಸಹಕಾರ ನೀಡದೆ ತಮ್ಮದೇ ಬೇರೆ ತಂಡ ರಚಿಸಿಕೊಂಡು ರಾಜ್ಯ ನಾಯಕರುಗಳಿಗೆ ಮುಜುಗುರ ಉಂಟುಮಾಡಿದ್ದರು. ಅವರನ್ನು ತಂಡದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.ಎಂ.ಪಿ.ರೇಣುಕಾಚಾರ್ಯ ಅವರ ನಿಷ್ಠೆ ಪಕ್ಷದ ಪರವಾಗಿ ಇದೆಯೇ ಅಥವಾ ವ್ಯಕ್ತಿಯ ಪರವಾಗಿದೆಯೇ ಎಂದು ಪ್ರಶ್ನಿಸಿದರು.ರೇಣುಕಾಚಾರ್ಯರು ಒಂದು ವರ್ಷದ ಹಿಂದೆ ಕಾಂಗ್ರೆಸ್ ಸೇರಲು ಯತ್ನಿಸಿದ್ದು ಅಲ್ಲದೇ ಹೇಳಿಕೆಗಳನ್ನು ನೀಡುತ್ತಾ ಪಕ್ಷಕ್ಕೆ ಧಕ್ಕೆ ತಂದಿದ್ದಾರೆ. ಶಾಸಕ ಬಸನಗೌಡ ಯತ್ನಾಳ್ ಅವರನ್ನು ಟೀಕಿಸುವ ಯಾವುದೇ ನೈತಿಕತೆ ರೇಣುಕಾಚಾರ್ಯರಿಗಿಲ್ಲ ಎಂದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಂತ ಶಕ್ತಿಯಿಂದ ಹೇಳಿಕೆ ನೀಡದೇ ಇತರರನ್ನು ನಕಲು ಮಾಡುತ್ತಾರೆ ಎಂದು ದೂರಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತದೆ ದೆಹಲಿಯಿಂದ ಟಕೆಟ್ ನನಗೆ ಘೋಷಣೆಯಾಗುತ್ತದೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.ಪಕ್ಷದ ಮುಖಂಡರಾದ ನೆಲಹೊನ್ನೆ ದೇವರಾಜ್, ಚನ್ನೇಶ್, ಕರಿಬಸಪ್ಪ, ಶಿವಾನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.