ಕನ್ನಡಪ್ರಭ ವಾರ್ತೆ ಬೈಲಹೊಂಗಲ ಧರ್ಮ ಜಾಗೃತಿ ಮಾಡುವುದರ ಜೊತೆಗೆ ಸಮಾಜ ಸಂಘಟಿಸುವಲ್ಲಿ ಹಗಳಿರುಳು ದುಡಿದ ಹಾನಗಲ್ ಶ್ರೀ ಕುಮಾರೇಶ್ವರರು ದೇವ ಮಾನವರಾಗಿದ್ದಾರೆ ಎಂದು ಗದಗ-ಡಂಬಳದ ಶ್ರೀತೋಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಧರ್ಮ ಜಾಗೃತಿ ಮಾಡುವುದರ ಜೊತೆಗೆ ಸಮಾಜ ಸಂಘಟಿಸುವಲ್ಲಿ ಹಗಳಿರುಳು ದುಡಿದ ಹಾನಗಲ್ ಶ್ರೀ ಕುಮಾರೇಶ್ವರರು ದೇವ ಮಾನವರಾಗಿದ್ದಾರೆ ಎಂದು ಗದಗ-ಡಂಬಳದ ಶ್ರೀತೋಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಹಾನಗಲ್ ಕುಮಾರೇಶ್ವರ ಶ್ರೀಗಳ 159 ನೇ ಜಯಂತಿ ಮಹೋತ್ಸವ ಹಾಗೂ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿಗಳ 32ನೇ ಪುಣ್ಯಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಮಾನವನ ಉದ್ಧಾರಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯಗಳನ್ನು ಸಮಾಜದಲ್ಲಿ ಬಿತ್ತರಿಸಿದ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳ ಪಾತ್ರ ಅನನ್ಯವಾಗಿದೆ. ಶಿವಯೋಗ ಮಂದಿರದ ಮೂಲಕ ಹಲವಾರು ಕ್ರಾಂತಿಗಳನ್ನು ಮಾಡಿ ಧರ್ಮ, ಅಧ್ಯಾತ್ಮ ಜಾಗೃತಗೊಳಿಸಿದ್ದಾರೆ ಎಂದರು.ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಬದುಕು ಹಸನಾಗಲು ಜ್ಞಾನದ ಬೆಳಕು ನೀಡಿ ಉನ್ನತೀಕರಿಸಿದ ಶಿವಯೋಗಿಗಳನ್ನು ಬದುಕಿನಲ್ಲಿ ಮರೆಯಬಾರದು. ಈ ನಿಟ್ಟಿನಲ್ಲಿ ಯುವ ಜನಾಂಗ ವಚನ ಸಾಹಿತ್ಯ, ಶರಣ ಪರಂಪರೆ ಅಲ್ಲಗಳೆಯಬಾರದು. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದಾಗ ದೇಶ ಸುಭದ್ರವಾಗಲು ಸಾಧ್ಯ ಎಂದು ಹೇಳಿದರು.
ಶೇಗುಣಿಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಮಾನವನಾಗಿ ಹುಟ್ಟಿದ ಮೇಲೆ ಪರೋಪಕಾರ ಎಲ್ಲರಲ್ಲಿಯೂ ಮೂಡಬೇಕು. ಈ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರದ ಜೊತೆಗೆ ಯುವಕರಲ್ಲಿ ಅಧ್ಯಾತ್ಮ ಪಸರಿಸಲು ಸುಮಾರು 17 ವರ್ಷಗಳಿಂದ ಬೈಲಹೊಂಗಲ ಭಾಗದಲ್ಲಿ ಎಡಬಿಡದೇ ಹಾನಗಲ್ ಕುಮಾರೇಶ್ವರ ಕುರಿತಾದ ಪ್ರವಚನ ಏರ್ಪಡಿಸಿ ಜಾಗೃತಿಗೆ ಕಾರಣರಾದ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರನ್ನು ಅಭಿನಂದಿಸಬೇಕಿದೆ ಎಂದರು.ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಸವದತ್ತಿಯ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ, ಬೆಳಗಾವಿಯ ಮೃತ್ಯುಂಜಯ ಸ್ವಾಮೀಜಿ ವೇದಿಕೆ ಮೇಲಿದ್ದರು. ವಿಶ್ವನಾಥ ಹಿರೇಮಠ, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ನಾಗನೂರು ಶಿವಬಸವ ಸ್ವಾಮೀಗಳ ಕಲ್ಯಾಣ ಮಂಟಪದ ಅಧ್ಯಕ್ಷ್ಯೆ ಸುಶೀಲಮ್ಮ ಕೌಜಲಗಿ, ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಾಟಿ, ಡಾ.ಬಸವರಾಜ ಮಹಾಂತಶೆಟ್ಟಿ, ಅಣ್ಣಪ್ಪ ಜೊಂಜಾಳೆ, ವಕೀಲ ಸಿದ್ದಣ್ಣ ಗದಗ, ಯುವ ಮುಖಂಡ ಬಸವರಾಜ ಕೌಜಲಗಿ, ಗ್ಯಾರಂಟಿಗಳ ತಾಲೂಕಾಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಡಾ.ಎ.ಎನ್.ಬಾಳಿ, ಶಂಕರಣ್ಣ ಬಾಳಿ, ಮಹಾಂತೇಶ ಅಕ್ಕಿ, ಗಿರಿಜಾ ಕೌಜಲಗಿ, ಸುರೇಖಾ ಕೌಜಲಗಿ, ಶೀಮಾ ಮೆಟಗುಡ್ಡ, ಶಾಂತಕ್ಕಾ ಗದಗ, ಉಷಾ ಬೆಲ್ಲದ, ಪುಷ್ಪಾ ದೇಶನೂರ, ಸುಧಾ ಸಂಗೊಳ್ಳಿ, ಸವಿತಾ ಶರಣಪ್ಪನವರ, ಮಂಗಲಾ ಅಲಸಂದಿ, ಜಯಶ್ರೀ ವಾಲಿ, ಶಿವಲಿಂಗ ಪರಂಡಿ, ಶ್ರೀಧರ ಶೆಟ್ಟರ, ಈರಣ್ಣ ಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶ್ವಗುರು ಬಸವೇಶ್ವರ, ಲಿಂ.ಹಾನಗಲ್ ಕುಮಾರೇಶ್ವರ ಹಾಗೂ ಡಾ.ಶಿವಬಸವ ಸ್ವಾಮೀಜಿಗಳ ಭಾವಚಿತ್ರಕ್ಕೆ ಶ್ರೀಗಳು ಪೂಜೆ ಸಲ್ಲಿಸಿದರು. ಪಾದಪೂಜೆ ಸಮಿತಿಗಳ ಸದಸ್ಯರು, ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶರಣೆ ಶೋಭಾ ಛಬ್ಬಿ ಸ್ವಾಗತಿಸಿದರು. ಶಿವಕುಮಾರ ಹಂಪನ್ನವರ ನಿರೂಪಿಸಿದರು. ಮಹಾಂತೇಶ ರಾಜಗೋಳಿ ವಂದಿಸಿದರು.