ಗ್ರಾಮಸ್ಥರ ಮನವಿಗೆ ಸ್ಪಂದಿಸದ ಇಲಾಖೆ ಅಧಿಕಾರಿಗಳು ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗನಹಳ್ಳಿ ಗ್ರಾಮದ ಕಲುಗಲ ಲಕ್ಷ್ಮಮ್ಮ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ಪ್ರತಿನಿತ್ಯ ಎಲ್ಲೆಡೆಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ಬೆಸ್ಕಾಂ ಇಲಾಖೆ ವಿದ್ಯುತ್ ವೈರ್‌ಗಳು ಕೈಗೆ ಎಟಕುತ್ತಿದ್ದು, ಯಾವುದೇ ಸಂದರ್ಭದಲ್ಲೂ ಪ್ರಾಣಾಪಾಯವಾಗುವ ಸಂಭವಿದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಲವಾರು ಬಾರಿ ಸಂಬಂಧಪಟ್ಟ ಬೆಸ್ಕಾಂ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ವೈರ್‌ಗಳ ಕೆಳಗೆ ದೇವಸ್ಥಾನಕ್ಕೆ ಬರಬೇಕಾದ ಸ್ಥಿತಿ ಇದೆ. ಇತ್ತೀಚೆಗೆ ಸಪ್ಪೆ ತುಂಬಿದ್ದ ಟ್ರ್ಯಾಕ್ಟರ್ ಹಾದು ಹೋಗುವಾಗ ವೈರ್‌ ತಗುಲಿ ಬೆಂಕಿ ತಾಕಿತ್ತು. ನೂರಾರು ರೈತರು ತಮ್ಮ ಎತ್ತಿನ ಗಾಡಿಗಳಲ್ಲಿ ಸಾಮಾಗ್ರಿಗಳನ್ನು ಹಾಕಿಕೊಂಡು ವ್ಯವಸಾಯಕ್ಕೆ ತೆರಳು ಹೋಗಬೇಕಿದೆ, ಶಾಲಾ ಮಕ್ಕಳು ಸಹ ಇಲ್ಲೇ ಆಟವಾಡಲು ಬರುತ್ತಾರೆ ಒಟ್ಟಿನಲ್ಲಿ ವಿದ್ಯುತ್ ವೈರ್‌ಗಳು ಕೈಗೆಟಕುವ ಸ್ಥಿತಿಯಲ್ಲಿದ್ದು, ಜನರ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವಲ್ಲಿ ಯಾವುದೇ ಸಂದೇಹವಿಲ್ಲ. ಈಗಲಾದರೂ ತಳಕು ಬೆಸ್ಕಾಂ ಇಲಾಖೆ ಅಧಿಕಾರಿಗಳು ತುರ್ತು ಗಮನಹರಿಸಿ, ವೈರ್‌ಗಳನ್ನು ಯಥಾಸ್ಥಿತಿಯಲ್ಲಿ ಇಡಬೇಕೆಂದು ಬೂದಿಹಳ್ಳಿ ರಾಜು, ಜಿ.ಕೃಷ್ಣಾರೆಡ್ಡಿ, ಗೋಪಾಲರೆಡ್ಡಿ, ಶಿವಣ್ಣ, ಗುರುಮೂರ್ತಿ, ಲಕ್ಷ್ಮಣ್‌ ರೆಡ್ಡಿ, ಸೀತಾರಾಮ ರೆಡ್ಡಿ, ಗಿಡ್ಡಾರೆಡ್ಡಿ, ಸಿ.ಡಿ.ನಾರಾಯಣರೆಡ್ಡಿ, ರಾಮಕೃಷ್ಣರೆಡ್ಡಿ ಮುಂತಾದವರು ಇಲಾಖೆಯನ್ನು ಒತ್ತಾಯಿಸಿದ್ದಾರೆ.