ನೆಲಮಂಗಲ: ಜಮೀನು ಖರೀದಿ ಮಾಡಿರೋದು ಸಾಬೀತು ಮಾಡಿದರೆ ಪಬ್ಲಿಕ್‍ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು
ನೆಲಮಂಗಲ: ಜಮೀನು ಖರೀದಿ ಮಾಡಿರೋದು ಸಾಬೀತು ಮಾಡಿದರೆ ಪಬ್ಲಿಕ್‍ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದರು.
ನೆಲಮಂಗಲ ಸಮೀಪದ ಮಾದಾವರ ಬಳಿಯ ನೈಸ್ ರಸ್ತೆಯಲ್ಲಿ ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಿಎಂ ಡಿಕೆಶಿ ಮೇಲೆ ನನಗೆ ಅಸೂಯೆ ಇಲ್ಲ. ಇನ್ನು 10 ವರ್ಷ ಅವರೇ ಸಿಎಂ ಆಗಿರಲಿ. ಆದರೆ ರೈತರ ಜೊತೆ ಯಾಕೆ ಚೆಲ್ಲಾಟ ಆಡ್ತಾ ಇದ್ದೀರಾ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲಿಂದ ಬಂದ್ರು ಅಂತಾರೆ, ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ನಾವೂ ಕರ್ನಾಟಕದವರೇ ಎಂದು ಕಿಡಿಕಾರಿದರು.ಸ್ವಾಭಿಮಾನದಿಂದ ಬದುಕಿದ್ದೇವೆ: ರಾಜಕೀಯಕ್ಕೆ ಬರುವ ಮುನ್ನವೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ. ನಾನು ನನ್ನ ಸಹೋದರರು, ನನ್ನ ಕುಟುಂಬದವರು ಕಾನೂನುಬಾಹಿರವಾಗಿ ಒಂದು ಇಂಚು ಭೂಮಿ ಪಡೆದಿರುವುದನ್ನು ನೀವು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತಗೊಂಡು, ಸಾರ್ವಜನಿಕವಾಗಿ ನೇಣು ಹಾಕಿಕೊಳ್ತೀನಿ ಎಂದು ಸವಾಲು ಹಾಕಿದರು. ನಾವು ಸ್ವಾಭಿಮಾನದಲ್ಲಿ ಬದುಕಿದ್ದೇವೆ. ಈ ಯೋಜನೆ ಹೆಸರಿನಲ್ಲಿ ಸಿಎಂ ಎಷ್ಟು ಎಕರೆ ಜಮೀನು ಲೂಟಿ ಮಾಡಿದ್ದಾರೆ ಗೊತ್ತಾ? ಎಂದು ಗುಡುಗಿದರು.
ನಮ್ಮ ಕುಟುಂಬದ ಮೇಲೆ ತನಿಖೆ ಮಾಡಿ:ನಾನು ಬ್ಲ್ಯಾಕ್‍ಮೇಲ್ ಮಾಡ್ತಿದ್ದೀನಿ ಅಂತ ಸಿಎಂ ಹೇಳುತ್ತಾರೆ. ನಾನು ಬ್ಲ್ಯಾಕ್‍ಮೇಲ್ ಮಾಡಿದ್ರೆ ಯಾಕೆ ನನ್ನ ಮೇಲೆ ಕೇಸ್ ಹಾಕಿಲ್ಲ. ಯಾರೋ ಒಬ್ಬ 3ಬಿ ಅಂತಾನೆ. ನೈಸ್ ನಲ್ಲಿ ನೀವು ಏನೇನು ಮಾಡಿದ್ದೀರಾ ಅನ್ನೋ ದಾಖಲಾತಿ ನನ್ನ ಬಳಿ ಇದೆ. ಪಶ್ಚಿಮ ಬಂಗಾಳದ ರೀತಿ ನಿಮ್ಮ ಭೂಮಿ ವಾಪಸ್ ಬರಬೇಕು. ನಮ್ಮ ಮೇಲೆ ಯಾವ ತನಿಖೆ ಬೇಕಾದರೂ ಮಾಡಿ. ದೇವೇಗೌಡರು ಪ್ರಧಾನಿ ಆದಾಗಿಂದ ಇಲ್ಲಿವರೆಗೂ ನಮ್ಮ ಆಸ್ತಿ ಬಗ್ಗೆಯೂ ತನಿಖೆ ಮಾಡಿ. ನಮ್ಮ ಆಸ್ತಿ, ನಮ್ಮ ಕುಟುಂಬದ ಬಗ್ಗೆ ಯಾವುದೇ ತನಿಖೆ ಮಾಡಿ ಎಂದು ಸವಾಲು ಹಾಕಿದರು.
ರೈತರಿಗೆ ಅಭಯ:ನನಗೆ ರಾಜಕೀಯ ಬೇಕಿಲ್ಲ. ಅಶೋಕ್ ಖೇಣಿ ಬಂಧನ ಆಗಬೇಕು. ಸಿದ್ದಗಂಗಾ ಮಠದ ಆಸ್ತಿ ಹೊಡೆದುಕೊಂಡು ಕೂತಿದ್ದಾರೆ. ಇಂತಹ ಸಿಎಂಗೆ ಸಹಕಾರ ಕೊಡ್ತೀರಾ ಎಂದು ಜನರನ್ನು ಕೇಳಿದ ಕುಮಾರಸ್ವಾಮಿ, ರೈತರ ಭೂಮಿ ವಾಪಸ್ ಕೊಡಿಸೋದು ನನ್ನ ಹೋರಾಟ. ಜನರು ಧ್ವನಿ ಎತ್ತಬೇಕು. ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆಂಧ್ರಪ್ರದೇಶದ ಮಹೇಶ್ ರೆಡ್ಡಿ ಜೊತೆ ಸಿಎಂ ಡಿಕೆ ಶಿವಕುಮಾರ್ ಒಟ್ಟಾಗಿ ಭೂಮಿ ಹೊಡೆಯೋಕೆ ನಿಂತಿದ್ದಾರೆ. ಜನರಿಗೆ ತಲೆ ಕೆಡಿಸುತ್ತಿದ್ದಾರೆ. ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಅಂತಿದ್ದಾರೆ. ನಿಮ್ಮ ಪರ ನಾನು ಇರುತ್ತೇನೆ ಎಂದು ರೈತರಿಗೆ ಅಭಯ ನೀಡಿದರು.
ಜನಾಂದೋಲನ ಆಗಬೇಕು:ದೇವೇಗೌಡರು ಓಡಾಡೋ ಪರಿಸ್ಥಿತಿಯಲ್ಲಿಲ್ಲ. ವ್ಹೀಲ್‍ಚೇರ್‍ನಲ್ಲಿ ರೈತರ ಪರ ನಾನು ಬರ್ತೀನಿ ಅಂತಾರೆ. ರೈತರ ಜಮೀನು ವಾಪಸ್ ಕೊಡಿಸೋದು ನನ್ನ ಜವಾಬ್ದಾರಿ. ನೀವು ಒಟ್ಟಾಗಿ ಇರಬೇಕು. ನನ್ನ ಮೇಲೆ ಎಷ್ಟು ಒತ್ತಡ ಇದೆ. ಈ ಹೋರಾಟ ಕೈ ಬಿಡಿ ಅಂತ ಬರ್ತಿದೆ. ಚುನಾವಣೆ ಖರ್ಚು ಹಿಡಿದು ಎಲ್ಲಾ ಕೊಡುತ್ತೇವೆ ಅಂತ ಬರ್ತಿದೆ. ನಾನು ಒಬ್ಬ ಸುಮ್ಮನೆ ಇದ್ದರೆ ಜಮೀನು ಲೂಟಿ ಮಾಡುತ್ತಾರೆ. ನಿಮ್ಮ ಊರಿನ ಜನರಿಗೂ ನೀವು ಇದರ ಬಗ್ಗೆ ಹೇಳಬೇಕು. ಇದರ ವಿರುದ್ಧ ಜನಾಂದೋಲನ ಆಗಬೇಕು. ಮೊದಲು ಶಾಂತಿಯುತ ಹೋರಾಟ ಮಾಡೋಣ. ಇದನ್ನ ವೀಕ್‌ನೆಸ್ ಅಂದರೆ ದೊಡ್ಡ ಹೋರಾಟ ಮಾಡೋಣ. ನಾನೇ ಮುಂದೆ ನಿಲುತ್ತೇನೆ, ನಿಮ್ಮನ್ನ ಮುಂದೆ ಬಿಡಲ್ಲ. ಮುಂದೆ ಮೀಟಿಂಗ್ ಕರೆಯುತ್ತೇನೆ. ಯಾವ ರೀತಿ ಮುಂದಿನ ಹೋರಾಟ ಅಂತ ಸಿದ್ಧ ಮಾಡ್ತೀನಿ ಎಂದರು.
ರೈತರಿಂದ ಅಹವಾಲು ಸ್ವೀಕಾರ:ನೈಸ್ ಟೋಲ್ ಪ್ಲಾಜಾ ಬಳಿ ತೋಟದ ಗುಡ್ಡಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ.ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ, ದೊಡ್ಡತೊಗೂರು, ಚಿಕ್ಕತೊಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಬೇಗೂರು ರೈತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದರು.
ಪೋಟೋ 11 :ನೆಲಮಂಗಲ ಸಮೀಪದ ಮಾದಾವರ ಬಳಿಯಿರುವ ನೈಸ್ ರಸ್ತೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.