ಬ್ರೂಸ್‌ಫೂಟ್‌ ವಸ್ತುಸಂಗ್ರಹಾಲಯಕ್ಕೆ ಹಂಸಲೇಖ ಭೇಟಿ

| Published : Feb 18 2025, 12:33 AM IST

ಸಾರಾಂಶ

ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಹಂಸಲೇಖ ನಗರದ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಹಂಸಲೇಖ ನಗರದ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ಇದೇ ವೇಳೆ ಉಪಸ್ಥಿತರಿದ್ದ ಇತಿಹಾಸ ತಜ್ಞ ಪ್ರೊ. ಕೋರಿಶೆಟ್ಟರ್ ವಸ್ತು ಸಂಗ್ರಹಾಲಯ ಸ್ಥಾಪನೆಯ ಉದ್ದೇಶ ಕುರಿತು ವಿವರಿಸಿದರಲ್ಲದೆ, ದೇಶ-ವಿದೇಶಗಳ ಪ್ರಾಗೈತಿಹಾಸಿಕ ನೆಲೆಗಳಿಂದ ಸಂಗ್ರಹಿಸಿದ ಪ್ರಾಗೈತಿಹಾಸಿಕ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.

ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯವಾಗಿದೆ. ಈ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ. ಜೊತೆಗೆ, ಪ್ರಾಗೈತಿಹಾಸಿಕ ಸಂಶೋಧನೆ ಮತ್ತು ಅಧ್ಯಯನ ಕ್ಷೇತ್ರ ನಿಂತ ನೀರಾಗಿರದೇ ಜ್ಞಾನದ ನೂತನ ಶಿಸ್ತುಗಳಿಗೆ ವ್ಯಾಪಿಸುತ್ತಾ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ಕಳೆದ ಐದು ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿರುವ ಈ ವಿಶಿಷ್ಟ ಸಂಗ್ರಹಾಲಯ ದೇಶವಿದೇಶಗಳ ಸಂಶೋಧಕರನ್ನು, ಅಧ್ಯಯನಶೀಲರನ್ನು, ಮಾನವನ ವಿಕಾಸದ ಬಗ್ಗೆ ಕುತೂಹಲ ಇರಿಸಿಕೊಂಡ ಜನ ಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿ ಈಗಾಗಲೇ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳನ್ನು ಜರುಗಿಸಲಾಗಿದ್ದು, ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಐಐಟಿಗಳು ನಮ್ಮೊಂದಿಗೆ ವಿವಿಧ ಯೋಜನೆಗಳಲ್ಲಿ ಸಹಭಾಗಿಯಾಗಲು ಉತ್ಸುಕತೆ ತೋರಿವೆ. ಎರಡು ಅಂತಸ್ತುಗಳ ಈ ವಸ್ತು ಸಂಗ್ರಹಾಲಯದ ಮೇಲಿನ ಭಾಗದಲ್ಲಿ ನವ ಶಿಲಾಯುಗ ಕಾಲದಲ್ಲಿ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಸುತ್ತಲಿನ ಕಲ್ಲು ಬೆಟ್ಟಗಳಲ್ಲಿ ಶಿಲಾ ಪರಿಕರಗಳನ್ನು ಉತ್ಪಾದಿಸುವ ಉದ್ಯಮ ವ್ಯವಸ್ಥಿತವಾಗಿ ನಡೆದಿತ್ತು ಎನ್ನುವುದರ ಬಗ್ಗೆ ಸಾಕಷ್ಟು ಪುರಾವೆಗಳು ಲಭಿಸಿವೆ. ಇಲ್ಲಿ ನಡೆದ ಉತ್ಖನನ ಕಾರ್ಯಗಳಲ್ಲಿ ಶಿಲಾಯುಗದ ಜೀವನ ಶೈಲಿ, ಮಾನವನ ನಿರಂತರ ವಿಕಾಸಗಳ ಬಗ್ಗೆ ಸಾಕಷ್ಟು ಹೊಳಹುಗಳು ದೊರೆತಿವೆ ಎಂದು ಡಾ. ಕೋರಿಶೆಟ್ಟರ್ ವಿವರಿಸಿದರು.

ವಸ್ತು ಸಂಗ್ರಹಾಲಯದ ಎಲ್ಲ ವಿಭಾಗಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಹಂಸಲೇಖ ಅವರು, ಈ ವಸ್ತು ಸಂಗ್ರಹಾಲಯದ ವಿಶಿಷ್ಟತೆ ನನ್ನಲ್ಲಿ ಅಚ್ಚರಿ ಮೂಡಿಸಿದೆ. ಪ್ರಾಗೈತಿಹಾಸಿಕ ಕಾಲದ ವಿಷಯಗಳು ಇಷ್ಟೊಂದು ಆಸಕ್ತಿಕರವಾಗಿವೆ. ಇದು ನಿಜಕ್ಕೂ ನಮ್ಮ ಸಾಂಸ್ಕೃತಿಕ ಸಂಪತ್ತು. ಇದನ್ನು ಜತನದಿಂದ ಕಾಪಾಡಿಕೊಳ್ಳಬೇಕಿದೆ. ಪ್ರಾಗೈತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಾಗಬೇಕಿದೆ. ಇಷ್ಟೊಂದು ವ್ಯವಸ್ಥಿತವಾದ ವಿಶೇಷ ವಸ್ತು ಸಂಗ್ರಹಾಲಯ ಬಳ್ಳಾರಿಯಂತಹ ಊರಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ, ಸಂತೋಷ್ ಮಾರ್ಟಿನ್, ಸಂಪನ್ಮೂಲ ವ್ಯಕ್ತಿ ಗೌರಿ ಇದ್ದರು.